×
Ad

ದಿಯಾ ಬಿನು, ಕೇರಳದ ಮೊದಲ Gen Z ಮತ್ತು ಭಾರತದ ಅತ್ಯಂತ ಕಿರಿಯ ನಗರಸಭಾಧ್ಯಕ್ಷೆ

Update: 2025-12-27 17:08 IST

Photo Credit : indiatoday.in

ಕೊಟ್ಟಾಯಂ : ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲ ನಗರಸಭೆಯು 21ರ ಹರೆಯದ ದಿಯಾ ಬಿನು ಪುಲಿಕ್ಕಕಂದಂ ಅವರನ್ನು ತನ್ನ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದೆ. ತನ್ಮೂಲಕ ದಿಯಾ ದೇಶದ ಅತ್ಯಂತ ಕಿರಿಯ ನಗರಸಭಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಗರಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದ್ದರಿಂದ ವಾರಗಳ ರಾಜಕೀಯ ಅನಿಶ್ಚಿತತೆಯ ಬಳಿಕ ದಿಯಾ ಅಧ್ಯಕ್ಷ ಹುದ್ದೆಗೇರಿದ್ದಾರೆ.

ಕೇರಳದ ಮೊದಲ Gen Z ನಗರಸಭಾಧ್ಯಕ್ಷೆಯಾಗಿರುವ ದಿಯಾ ಪಾಲ ನಗರಸಭೆಯ 15ನೇ ವಾರ್ಡಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, 131 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದರು. ಅವರ ತಂದೆ ಬಿನು ಪುಲಿಕ್ಕಕಂದಂ ಮತ್ತು ಚಿಕ್ಕಪ್ಪ ಬಿಜು ಪುಲಿಕ್ಕಕಂದಂ ಅವರೂ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಗೆದ್ದಿದ್ದಾರೆ. ಇದರಿಂದಾಗಿ ಆಡಳಿತ ಮಂಡಳಿಯ ರಚನೆಯಲ್ಲಿ ಪ್ರಭಾವಿ ಪುಲಿಕ್ಕಕಂದಂ ಕುಟುಂಬವು ನಿರ್ಣಾಯಕ ಪಾತ್ರವನ್ನು ಹೊಂದಿತ್ತು.

ಮಾಧ್ಯಮಗಳೊಂದಿಗೆ ಮಾತನಾಡಿದ ದಿಯಾ ಮೂಲಭೂತ ಅಭಿವೃದ್ಧಿ ಮತ್ತು ನಗರಸಭೆಗಾಗಿ ದೀರ್ಘಾವಧಿ ಯೋಜನೆ ತನ್ನ ಆದ್ಯತೆಯಾಗಲಿದೆ ಎಂದು ಹೇಳಿದರು.

‘ನನ್ನ ತಂದೆ ಸತತ ಐದನೇ ಬಾರಿಗೆ ಗೆದ್ದಿದ್ದಾರೆ. ನಾನು ಒಂದು ವರ್ಷದವಳಿದ್ದಾಗ ಅವರು ಮೊದಲ ಬಾರಿಗೆ ಕೌನ್ಸಿಲರ್ ಆಗಿದ್ದರು. ಅವರ ಕಾರ್ಯವನ್ನು ನೋಡುತ್ತಲೇ ನಾನು ಬೆಳೆದಿದ್ದೆ ಮತ್ತು ಅದು ನನಗೆ ಸ್ಫೂರ್ತಿಯನ್ನು ನೀಡಿತ್ತು’ ಎಂದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಅರ್ಥಶಾಸ್ತ್ರ ಪದವೀಧರೆ ದಿಯಾ ಹೇಳಿದರು. ನಗರಸಭೆಯ ಅಧ್ಯಕ್ಷೆಯಾಗಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸಿರುವುದಾಗಿ ಅವರು ತಿಳಿಸಿದರು.

ದಿಯಾ ಇತಿಹಾಸ ನಿರ್ಮಿಸಿದ್ದು ಹೇಗೆ?

26 ಸದಸ್ಯರ ಮಂಡಳಿಯಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತವನ್ನು ಗಳಿಸದ್ದರಿಂದ ಸ್ವತಂತ್ರ ಅಭ್ಯರ್ಥಿಗಳು ‘ಕಿಂಗ್ ಮೇಕರ್’ ಆಗಿದ್ದರು. ಆಡಳಿತಾರೂಢ ಎಲ್‌ಡಿಎಫ್ 12 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ 10 ಸ್ಥಾನಗಳನ್ನು ಗಳಿಸಿದ್ದವು. ಉಳಿದ ನಾಲ್ಕು ಸ್ಥಾನಗಳು ಪುಲಿಕ್ಕಕಂದಂ ಕುಟುಂಬದ ಮೂವರು ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಾಯಾ ರಾಹುಲ್ ಸೇರಿದಂತೆ ನಾಲ್ವರು ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿದ್ದವು.

ಪುಲಿಕ್ಕಕಂದಂ ಕುಟುಂಬದ ಬೆಂಬಲದೊಂದಿಗೆ ಅಂತಿಮವಾಗಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದ್ದು,ಮಾಯಾ ರಾಹುಲ್ ಕೂಡ ಅದನ್ನು ಬೆಂಬಲಿಸಿ ಉಪಾಧ್ಯಕ್ಷೆಯ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಪುಲಿಕ್ಕಕಂದಂ ಕುಟುಂಬದ ಬೆಂಬಲವನ್ನು ಪಡೆಯಲು ಎಲ್‌ಡಿಎಫ್ ನಾಯಕತ್ವ ಪ್ರಯತ್ನಿಸಿತ್ತಾದರೂ ಅಧ್ಯಕ್ಷ ಹುದ್ದೆಯ ವಿಷಯದಲ್ಲಿ ಭಿನ್ನಾಭಿಪ್ರಾಯದಿಂದಾಗಿ ಸಂಧಾನ ಮಾತುಕತೆ ವಿಫಲಗೊಂಡಿತ್ತು. ಪರಿಣಾಮವಾಗಿ 1985ರಲ್ಲಿ ಪಾಲ ನಗರಸಭೆ ರಚನೆಯಾದ ಬಳಿಕ ಎಲ್‌ಡಿಎಫ್‌ನ ಮಿತ್ರಪಕ್ಷ ಕೇರಳ ಕಾಂಗ್ರೆಸ್(ಎಂ) ಇದೇ ಮೊದಲ ಬಾರಿಗೆ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News