ಐಎಎಸ್ ಅಧಿಕಾರಿ ನವನೀತ್ ಸೆಹಗಲ್‌ಗೆ ಬಿಜೆಪಿ ಪ್ರಾಮುಖ್ಯತೆ ನೀಡುತ್ತಿರುವುದೇಕೆ?: ಕಾಂಗ್ರೆಸ್ ಪ್ರಶ್ನೆ
ಆದಾಯ ತೆರಿಗೆ ಇಲಾಖೆ ಸೆಹಗಲ್ ವಿರುದ್ಧ ವರದಿ ನೀಡಿದ್ದರೂ ಬಿಜೆಪಿ ಸರಕಾರ ಅವರನ್ನು ರಕ್ಷಿಸುತ್ತಿದೆ: ಪವನ್ ಖೇರಾ ಆರೋಪ
ನವನೀತ್ ಸೆಹಗಲ್ (Photo credit: madhyamamonline.com)
ಹೊಸದಿಲ್ಲಿ: ಕೇಂದ್ರದ ಬಿಜೆಪಿ ಸರಕಾರ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ನವನೀತ್ ಸೆಹಗಲ್ ಅವರನ್ನು ಏಕೆ ಮುಖ್ಯವೆಂದು ಪರಿಗಣಿಸುತ್ತದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಆದಾಯ ತೆರಿಗೆ ಇಲಾಖೆಯು ಉತ್ತರ ಪ್ರದೇಶ ಸರಕಾರ ಮತ್ತು ಲೋಕಾಯುಕ್ತಕ್ಕೆ ಅವರ ಬಗ್ಗೆ ಕಟುವಾದ ವರದಿಯನ್ನು ಸಲ್ಲಿಸಿದ್ದರೂ ಅವರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಆರೋಪಿಸಿದೆ.
ಎಐಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ನ್ಯೂಸ್ ಲ್ಯಾಂಡ್ರಿ ಸುದ್ದಿ ಪೋರ್ಟಲ್‌ನ ವರದಿಯನ್ನು ಉಲ್ಲೇಖಿಸಿ, ಆದಾಯ ತೆರಿಗೆ ಇಲಾಖೆ ನಡೆಸಿದ ತನಿಖೆಯ ಬಗ್ಗೆ ಹೇಳಿದರು. ಈ ತನಿಖೆಯು ಸೆಹಗಲ್ ಅವರನ್ನು ದೋಷಾರೋಪ ಮಾಡುವ 254 ಪುಟಗಳ ಗೌಪ್ಯ ವರದಿಯನ್ನು ಸಲ್ಲಿಸಿದೆ. ಆದರೂ ಅವರ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
ಸೆಹಗಲ್ ಅವರನ್ನು ಈಗ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಪವನ್ ಖೇರಾ, ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ನಡೆಯುತ್ತಿರುವ 'ಡಬಲ್ ಎಂಜಿನ್' ಸರಕಾರದಲ್ಲಿ ಅವರು ಪಿಸ್ಟನ್ನಂತೆ ಕೆಲಸ ಮಾಡುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.
ʼನ್ಯೂಸ್ ಲಾಂಡ್ರಿʼ ವರದಿಯನ್ನು ಉಲ್ಲೇಖಿಸಿದ ಪವನ್ ಖೇರಾ, ಆದಾಯ ತೆರಿಗೆ ಇಲಾಖೆಯು ಸೆಹಗಲ್ ಅವರನ್ನು 2019–20 ಮತ್ತು 2021–22ರ ನಡುವೆ ಉತ್ತರ ಪ್ರದೇಶ ಸರಕಾರದ ಯೋಜನೆಗಳಿಂದ ಸುಮಾರು 112 ಕೋಟಿ ಸಾರ್ವಜನಿಕ ಹಣವನ್ನು ಕಬಳಿಸಿದ ಕಿಕ್‌ಬ್ಯಾಕ್ ಜಾಲದ ಅತಿದೊಡ್ಡ ಆಪಾದಿತ ಫಲಾನುಭವಿ ಎಂದು ಗುರುತಿಸಿದೆ ಎಂದು ಆರೋಪಿಸಿದ್ದಾರೆ. ತನಿಖೆಯ ಅವಧಿಯಲ್ಲಿ, ಸೆಹಗಲ್ ಅವರು ಎಂಎಸ್ಎಂಇ ಮತ್ತು ಖಾದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (IED) ಮತ್ತು ಯುಪಿ ಇಂಡಸ್ಟ್ರಿಯಲ್ ಕನ್ಸಲ್ಟೆಂಟ್ಸ್ ಲಿಮಿಟೆಡ್ (UPICON)ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ಪವನ್ ಖೇರಾ ಹೇಳಿದ್ದಾರೆ.
ನ್ಯೂಸ್ ಲಾಂಡ್ರಿ ವರದಿಯು ಐಇಡಿಗೆ ಸುಮಾರು 65 ಕೋಟಿ ರೂ, ಮತ್ತು UPICON ಗೆ 46 ಕೋಟಿ ರೂ.ಹಣವನ್ನು ವಂಚಿಸಲಾಗಿದೆ ಎಂದು ಆರೋಪಿಸಿದೆ. ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ನಡುವೆ ಹಣವನ್ನು ಮರುಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಅಂದಾಜು ಪ್ರಕಾರ, ಸೆಹಗಲ್ ತರಬೇತಿ ಮತ್ತು ಟೂಲ್‌ಕಿಟ್ ಸಂಬಂಧಿತ ಒಪ್ಪಂದಗಳಿಂದ ಮೂರು ವರ್ಷಗಳಲ್ಲಿ 24 ರಿಂದ 26 ಕೋಟಿಗಳನ್ನು ಕಿಕ್‌ಬ್ಯಾಕ್ ರೂಪದಲ್ಲಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.