×
Ad

ಪಶ್ಚಿಮ ಬಂಗಾಳ SIR | ಕೈಬಿಡಲಾದ 58.20 ಲಕ್ಷ ಮತದಾರರ ಪೈಕಿ ಬಾಂಗ್ಲಾದೇಶಿಗರು ಮತ್ತು ರೊಹಿಂಗ್ಯಾಗಳ ಸಂಖ್ಯೆ ಬಹಿರಂಗಪಡಿಸಿ: EC ಗೆ ಅಭಿಷೇಕ್ ಬ್ಯಾನರ್ಜಿ ಸವಾಲು

Update: 2025-12-27 18:52 IST

ಅಭಿಷೇಕ್ ಬ್ಯಾನರ್ಜಿ | Photo Credit : PTI 

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಸಿದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ(SIR) ಅಭಿಯಾನದ ಬಳಿಕ ಕೈಬಿಡಲಾದ 58.20 ಲಕ್ಷ ಮತದಾರರ ಪೈಕಿ ಎಷ್ಟು ಮಂದಿ ಬಾಂಗ್ಲಾದೇಶಿಗರು ಹಾಗೂ ರೊಹಿಂಗ್ಯಾಗಳು ಎಂಬುದನ್ನು ಚುನಾವಣಾ ಆಯೋಗ ಬಹಿರಂಗಪಡಿಸಲೇಬೇಕು ಎಂದು ಶನಿವಾರ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, “2021ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದ ಬಳಿಕ, ಕೇಂದ್ರ ಸರಕಾರವು ಆಯ್ಕೆ ಮಾಡಿಕೊಂಡು ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿಕೊಂಡಿದೆ. ಆ ಮೂಲಕ, ರಾಜ್ಯದ ಜನತೆಗೆ ಕಿರುಕುಳ ನೀಡುವುದು ಅದರ ಕಾರ್ಯಸೂಚಿಯಾಗಿದೆ” ಎಂದು ಆರೋಪಿಸಿದ್ದಾರೆ.

ರಾಜ್ಯದ ಜನಸಂಖ್ಯೆ 10.05 ಕೋಟಿ ಆಗಿದ್ದು, ಈ ಪೈಕಿ ಸದ್ಯ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ 58.20 ಲಕ್ಷ ಮತದಾರರನ್ನು ತೆಗೆದು ಹಾಕಲಾಗಿದೆ ಎಂದು ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಅಭಿಷೇಕ್ ಬ್ಯಾನರ್ಜಿ ದೂರಿದ್ದಾರೆ.

“ಇದು ಒಟ್ಟು ಜನಸಂಖ್ಯೆಯ ಕೇವಲ ಶೇ. 5.79ರಷ್ಟು ಆಗಿದ್ದು, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಎಲ್ಲ ರಾಜ್ಯಗಳಿಗೂ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ” ಎಂದು ಅವರು ಹೇಳಿದ್ದಾರೆ.

“ರಾಜ್ಯದಲ್ಲಿ ಕೈಬಿಡಲಾಗಿರುವ 58.20 ಲಕ್ಷ ಮತದಾರರ ಪೈಕಿ ಎಷ್ಟು ಮಂದಿ ಬಾಂಗ್ಲಾದೇಶಿಗರು ಹಾಗೂ ರೊಹಿಂಗ್ಯಾಗಳು ಆಗಿದ್ದಾರೆ ಎಂಬ ಅಂಕಿ-ಅಂಶವನ್ನು ಭಾರತೀಯ ಚುನಾವಣಾ ಆಯೋಗ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News