Bangladesh| ಮುಹಮ್ಮದ್ ಯೂನಸ್ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ 2,900ಕ್ಕೂ ಹೆಚ್ಚು ಹಿಂಸಾಚಾರ: ಭಾರತ ಕಳವಳ
ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Photo: PTI)
ಹೊಸದಿಲ್ಲಿ: ಭಾರತ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರದ ಅವಧಿಯಲ್ಲಿ 2,900ಕ್ಕೂ ಅಧಿಕ ದೌರ್ಜನ್ಯ ಘಟನೆಗಳು ದಾಖಲಾಗಿವೆ. ಕಳೆದ ವಾರ ಮೈಮೆನ್ಸಿಂಗ್ನಲ್ಲಿ ಹಿಂದೂ ಯುವಕನ ಹತ್ಯೆ ಸೇರಿದಂತೆ ಇತ್ತೀಚಿನ ದಾಳಿಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರತ ಆಗ್ರಹಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಮೂಲಗಳ ಪ್ರಕಾರ ಹಿಂದೂಗಳು, ಕ್ರೈಸ್ತರು ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧದ 2,900ಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳು ನಡೆದಿದೆ. ಇದರಲ್ಲಿ ಹತ್ಯೆಗಳು, ಬೆಂಕಿ ಹಚ್ಚುವಿಕೆ ಮತ್ತು ಭೂಕಬಳಿಕೆ ಸೇರಿವೆ. ಅಂತಹ ಘಟನೆಗಳನ್ನು ಮಾಧ್ಯಮ ಉತ್ಪ್ರೇಕ್ಷೆ ಅಥವಾ ಸಾಮಾನ್ಯ ರಾಜಕೀಯ ಹಿಂಸಾಚಾರ ಎಂದು ತಳ್ಳಿಹಾಕುವಂತಿಲ್ಲ ಎಂದು ಹೇಳಿದ್ದಾರೆ.
ಭಾರತವು ದೀಪು ಚಂದ್ರ ದಾಸ್ ಅವರ ಹತ್ಯೆಯನ್ನು ಖಂಡಿಸಿದೆ. ತಪ್ಪಿತಸ್ಥರನ್ನು ನ್ಯಾಯದ ಮುಂದೆ ತರಬೇಕು ಎಂದು ಹೇಳಿದೆ. ಬಾಂಗ್ಲಾದೇಶದ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಿದ್ದಾರೆ.
ರಾಜ್ಬರಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಅಮೃತ್ ಮಂಡಲ್ ಹತ್ಯೆಯನ್ನು ಜೈಸ್ವಾಲ್ ಉಲ್ಲೇಖಿಸಿದ್ದು, ಇದು ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಅಲ್ಪಸಂಖ್ಯಾತರ ಮೇಲಿನ ದ್ವೇಷಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಶೇಖ್ ಹಸೀನಾ ಸರಕಾರದ ಪತನಕ್ಕೆ ಕಾರಣವಾದ ಪ್ರತಿಭಟನೆಯ ಪ್ರಮುಖ ರುವಾರಿ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಉಂಟಾಗಿದೆ. ಹಾದಿ ಹತ್ಯೆಗೆ ಭಾರತದ ಜೊತೆ ಸಂಬಂಧ ಕಲ್ಪಿಸಲು ಯತ್ನಿಸುವ ಪ್ರಯತ್ನಗಳನ್ನು ಭಾರತ ತಿರಸ್ಕರಿಸಿದೆ.
ನೆರೆಯ ದೇಶಗಳಲ್ಲಿನ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಫೆಬ್ರವರಿ 12 ರಂದು ನಡೆಯಲಿರುವ ಶಾಂತ, ಮುಕ್ತ, ನ್ಯಾಯಯುತ ಸಂಸತ್ತಿನ ಚುನಾವಣೆಗಳಿಗೆ ತನ್ನ ಬೆಂಬಲವನ್ನು ಭಾರತ ಪುನರುಚ್ಛರಿಸಿದೆ.