'ಆಪರೇಷನ್ ಸಿಂಧೂರ್' ನ ಅತ್ಯಂತ ಕಿರಿಯ ನಾಗರಿಕ ಯೋಧ ಮತ್ತು ಬಾಲ ಪುರಸ್ಕಾರ್ ಪ್ರಶಸ್ತಿ ವಿಜೇತ ಶ್ರವಣ್ ಸಿಂಗ್ ಯಾರು?
Photo Credit : X/@rashtrapatibhvn
ಹೊಸದಿಲ್ಲಿ, ಡಿ.27: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಂಜಾಬಿನ ಫಿರೋಝ್ ಪುರದ 10ರ ಹರೆಯದ ಬಾಲಕ ಶ್ರವಣ್ ಸಿಂಗ್ ಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಯನ್ನು ಪ್ರದಾನಿಸಿದ್ದು, ಇದರಿಂದಾಗಿ ಶ್ರವಣ್ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾನೆ.
ಬಾಲ ಪುರಸ್ಕಾರ್ ಪ್ರಶಸ್ತಿಯನ್ನು 5ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಅವರ ಅದ್ಭುತ ಸಾಧನೆಗಳಿಗಾಗಿ ನೀಡಲಾಗುತ್ತಿದ್ದು, ಇದು ಮಕ್ಕಳಿಗೆ ನೀಡಲಾಗುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿದೆ. ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ನಿರ್ಭೀತಿಯಿಂದ ಸಲ್ಲಿಸಿದ್ದ ಸೇವೆಗಾಗಿ ಶ್ರವಣ್ ಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಕಾರ್ಯಾಚರಣೆ ಸಂದರ್ಭದಲ್ಲಿ ಅತ್ಯಂತ ಧೈರ್ಯವನ್ನು ಪ್ರದರ್ಶಿಸಿದ್ದ ಶ್ರವಣ್ ಯೋಧರ ಅಗತ್ಯವನ್ನು ಅರಿತುಕೊಂಡು ಅವರಿಗೆ ಪ್ರತಿ ದಿನವೂ ನೀರು, ಹಾಲು, ಚಹಾ, ಐಸ್, ಲಸ್ಸಿ ಇತ್ಯಾದಿಗಳಂತಹ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದ.
ಶ್ರವಣ್ ನ ನಿಸ್ವಾರ್ಥ ಸೇವೆಗಾಗಿ ಭಾರತೀಯ ಸೇನೆಯು ‘ಅತ್ಯಂತ ಕಿರಿಯ ನಾಗರಿಕ ಯೋಧ’ ಎಂಬ ಗೌರವವನ್ನು ನೀಡಿದೆ. ‘ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಆರಂಭಗೊಂಡಾಗ ಯೋಧರು ನಮ್ಮ ಗ್ರಾಮಕ್ಕೆ ಬಂದಿದ್ದರು. ಅವರಿಗೆ ಸೇವೆ ಸಲ್ಲಿಸಲು ನಾನು ನಿರ್ಧರಿಸಿದ್ದೆ ಮತ್ತು ಎಲ್ಲ ಅಪಾಯಗಳ ನಡುವೆಯೇ ಅವರಿಗಾಗಿ ಪ್ರತಿದಿನವೂ ಹಾಲು, ಚಹಾ, ಮಜ್ಜಿಗೆ ಮತ್ತು ಐಸ್ ಒಯ್ಯುತ್ತಿದ್ದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕೆ ನನಗೆ ತುಂಬ ಸಂತೋಷವಾಗಿದೆ. ನಾನು ಇದರ ಬಗ್ಗೆ ಕನಸನ್ನೂ ಕಂಡಿರಲಿಲ್ಲ’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಶ್ರವಣ ಹೇಳಿದ.
‘ಶ್ರವಣ್ ಸೇನೆಗೆ ಸೇವೆ ಸಲ್ಲಿಸುವುದರಲ್ಲಿ ಖುಷಿಯನ್ನು ಕಂಡುಕೊಂಡಿದ್ದರಿಂದ
ನಾವೆಂದೂ ಆತನನ್ನು ತಡೆದಿರಲಿಲ್ಲ’ ಎಂದು ಆತನ ತಂದೆ ಸೋನಾ ಸಿಂಗ್ ಹೆಮ್ಮೆಯಿಂದ ಹೇಳಿಕೊಂಡರು. ಶ್ರವಣ್ ತಾನು ಮುಂದೆ ಯೋಧನಾಗಬೇಕು ಎಂದೂ ಬಯಸಿದ್ದಾನೆ.