Madhya Pradesh | ಬಿಜೆಪಿ ನಾಯಕನ ಕುಟುಂಬದ ಹೆಸರು ಉಲ್ಲೇಖಿಸಿ ಆತ್ಮಹತ್ಯೆಗೆ ಯತ್ನಿಸಿದ ಅತ್ಯಾಚಾರ ಸಂತ್ರಸ್ತೆ
ಸಾಂದರ್ಭಿಕ ಚಿತ್ರ
ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ನಾಯಕ ಹಾಗೂ ಶಿವಪುರಿ ನಗರ ಪಾಲಿಕೆಯ ಅಧ್ಯಕ್ಷೆ ಗಾಯತ್ರಿ ಶರ್ಮರ ಪುತ್ರ ರಜತ್ ಶರ್ಮ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದ ಮಹಿಳೆಯೊಬ್ಬರು, ನಿದ್ರೆ ಮಾತ್ರೆ ಹಾಗೂ ಇಲಿ ಪಾಷಾಣವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಪುರಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣವೇ ಆಕೆಯ ಆರೋಗ್ಯ ಸ್ಥಿತಿ ವಿಷಮಿಸಿದ್ದು, ಆಕೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ವೈದ್ಯಕೀಯ ನಿಗಾವಣೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಎಪ್ರಿಲ್ 14ರಂದು ಸಂತ್ರಸ್ತ ಮಹಿಳೆಯು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರು. ಈ ದೂರನ್ನು ಆಧರಿಸಿ, ವಿವಿಧ ಸೆಕ್ಷನ್ ಗಳಡಿ ರಜತ್ ಶರ್ಮ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸುಮಾರು ಒಂದು ತಿಂಗಳ ಬಳಿಕ ಆತನಿಗೆ ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಸಂತ್ರಸ್ತ ಮಹಿಳೆಯು ಆತ್ಮಹತ್ಯೆಗೆ ಪ್ರಯತ್ನಿಸುವುದಕ್ಕೂ ಮುನ್ನ, ನನಗೆ ಕಳೆದ ಏಳು ತಿಂಗಳಿನಿಂದ ಮಾನಸಿಕ ಕಿರುಕುಳ ಹಾಗೂ ಬೆದರಿಕೆಯನ್ನು ಒಡ್ಡಲಾಗುತ್ತಿದೆ ಎಂದು ಆರು ಪುಟದ ಸುಸೈಡ್ ನೋಟ್ ನಲ್ಲಿ ಆರೋಪಿಸಿದ್ದಾರೆ.
ನಗರ ಪಾಲಿಕೆ ಅಧ್ಯಕ್ಷೆ ಗಾಯತ್ರಿ ಶರ್ಮ, ಅವರ ಪತಿ ಸಂಜಯ್ ದುಬೆ ಹಾಗೂ ಅವರಿಬ್ಬರ ಪುತ್ರ ರಜತ್ ಶರ್ಮ ನನ್ನನ್ನು ಮಾನಸಿಕ ಖಿನ್ನತೆಗೆ ದೂಡಿದ್ದಾರೆ ಎಂದು ಅವರು ತಮ್ಮ ಡೆತ್ ನೋಟ್ ನಲ್ಲಿ ದೂಷಿಸಿದ್ದಾರೆ.
ನನ್ನನ್ನು ವಿವಾಹವಾಗುವುದಾಗಿ ರಜತ್ ಶರ್ಮ ಭರವಸೆ ನೀಡಿದ್ದ. ಆದರೆ, ಅದೇ ವೇಳೆ ಆತನ ಕುಟುಂಬದ ಸದಸ್ಯರು ಬೇರೊಂದು ಕಡೆ ನಿಶ್ಚಿತಾರ್ಥವನ್ನು ಯೋಜಿಸಿದ್ದರು ಎಂದೂ ಆಕೆ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಪುರಿ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಸಿಂಗ್ ರಾಥೋರ್, ಸಂತ್ರಸ್ತ ಮಹಿಳೆಯ ದೂರನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಸಂಬಂಧ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
“ಪ್ರಕರಣವು ನ್ಯಾಯಾಲಯದ ಮುಂದೆ ಬಾಕಿ ಇದೆ. ಆಕೆಯ ಸುಸೈಡ್ ನೋಟ್ ಅನ್ನು ವಶಪಡಿಸಿಕೊಳ್ಳದಲಾಗಿದೆ. ಚೇತರಿಸಿಕೊಂಡ ನಂತರ ಆಕೆಯ ಹೇಳಿಕೆಯನ್ನು ಪಡೆದು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದ್ದಾರೆ.