ಪಾಕ್ ಶೆಲ್ ದಾಳಿ ವೇಳೆ ಧೈರ್ಯದಿಂದ ಗ್ರಾಮಸ್ಥರ ಸೇವೆ ಮಾಡಿದ್ದ ವೈದ್ಯರು
ಡಾ. ಅಮರ್‌ಜೀತ್ ಸಿಂಗ್ ಭಾಟಿಯಾ / ಡಾ. ರುಬಿನಾ (Photo credit: newindianexpress.com)
ರಾಜೌರಿ: ಮೇ 7 ರಂದು 'ಆಪರೇಷನ್ ಸಿಂಧೂರ್' ಪ್ರಾರಂಭವಾದ ನಂತರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳ ಮೇಲೆ ಪಾಕಿಸ್ತಾನದ ಸೇನೆಯಿಂದ ಫಿರಂಗಿ ಶೆಲ್ ದಾಳಿ ನಡೆಯುತ್ತಿದ್ದಂತೆ ಅವಳಿ ಗಡಿ ಜಿಲ್ಲೆಗಳ ಎರಡು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮುಂದೆ ನಿಂತು ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ವೈದ್ಯರ ಸೇವೆಯು ಮೆಚ್ಚುಗೆಗೆ ಪಾತ್ರವಾಗಿದೆ ಎಂದು newindianexpress.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಅಸೋಸಿಯೇಟೆಡ್ ಆಸ್ಪತ್ರೆಯ ಪ್ರಾಂಶುಪಾಲ ಡಾ. ಅಮರ್‌ಜೀತ್ ಸಿಂಗ್ ಭಾಟಿಯಾ, "ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು", ಎಂದು ಆ ಭಯಾನಕ ಕ್ಷಣವನ್ನು ನೆನಪಿಸಿಕೊಂಡರು. "ಶೆಲ್‌ಗಳು ಹತ್ತಿರದಲ್ಲಿ ಬೀಳುತ್ತಿದ್ದಂತೆ ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಶೆಲ್ ದಾಳಿ ನಡೆಯಿತು. ಆಸ್ಪತ್ರೆಯಲ್ಲಿ ಜೋರಾಗಿ ಸ್ಫೋಟದ ಶಬ್ದ ಕೇಳಿಬಂದವು", ಎಂದು ಹೇಳಿದರು.
"ಶೆಲ್ ದಾಳಿ ಪ್ರಾರಂಭವಾದ ತಕ್ಷಣ, ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಎಲ್ಲಾ ವೈದ್ಯರು, ಪ್ಯಾರಾಮೆಡಿಕಲ್ ಮತ್ತು ಇತರ ಸಿಬ್ಬಂದಿಯನ್ನು ಆಸ್ಪತ್ರೆಯಲ್ಲಿಯೇ ಇರುವಂತೆ ಸೂಚಿಸಲಾಯಿತು. ನಾವು ಯಾರೂ ನಾಲ್ಕು ದಿನಗಳವರೆಗೆ ಆಸ್ಪತ್ರೆಯಿಂದ ಹೊರಹೋಗಲಿಲ್ಲ. ಸಿಬ್ಬಂದಿ ಮತ್ತು ಇತರರಿಗಾಗಿ ಆಸ್ಪತ್ರೆಯ ನೆಲಮಾಳಿಗೆಯನ್ನು ಸಿದ್ಧಪಡಿಸಿದೆವು. ಇದಕ್ಕೆ ಎಲ್ಲರೂ ಸಹಕರಿಸಿದರು. ಶೆಲ್ ದಾಳಿಯ ನಾಲ್ಕು ದಿನಗಳಲ್ಲಿ ವೈದ್ಯರು ತಮ್ಮ ರೋಸ್ಟರ್ ಕರ್ತವ್ಯವನ್ನು ಅನುಸರಿಸಲಿಲ್ಲ. ಬದಲಾಗಿ 24x7 ಕೆಲಸ ಮಾಡಿದರು. ಆ ನಾಲ್ಕು ದಿನಗಳಲ್ಲಿ ಒಬ್ಬನೇ ಒಬ್ಬ ವೈದ್ಯ ಅಥವಾ ಅರೆವೈದ್ಯ ಆಸ್ಪತ್ರೆಯಿಂದ ಹೊರಹೋಗಲಿಲ್ಲ" ಎಂದು ಅವರು ಹೇಳಿದರು.
ಶೆಲ್ ದಾಳಿಯ ನಂತರ ಮೂವತ್ತು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅವರಲ್ಲಿ, ಉನ್ನತ ಸರ್ಕಾರಿ ಅಧಿಕಾರಿಯೋರ್ವರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಇತರ 27 ಜನರಿಗೆ ಚಿಕಿತ್ಸೆ ನೀಡಲಾಯಿತು. ಮೂವರು ರೋಗಿಗಳ ಸ್ಥಿತಿ ತುಂಬಾ ಗಂಭೀರವಾಗಿತ್ತು. ವೈದ್ಯರು ಅವರಿಗೆ ಬೇರೆ ಬೇರೆ ಶಸ್ತ್ರಚಿಕಿತ್ಸೆಗಳನ್ನು ಮಾಡಿದರು. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟರು. ಅದೃಷ್ಟವಶಾತ್ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ. ಅವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ" ಎಂದು ಭಾಟಿಯಾ ಹೇಳಿದರು.
ಪಾಕಿಸ್ತಾನಿ ಶೆಲ್ ದಾಳಿಯಿಂದ ಹೆಚ್ಚು ಹಾನಿಗೊಳಗಾದ ಪೂಂಚ್ ಜಿಲ್ಲೆಯಲ್ಲಿ, ಜಿಲ್ಲಾ ಆಸ್ಪತ್ರೆಯ ವೈದ್ಯರು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ತಮ್ಮ ಕೆಲಸದ ಅವಧಿ ಮೀರಿ ಕರ್ತವ್ಯ ನಿರ್ವಹಿಸಿದರು. ಮೇ 7 ರಂದು ಬೆಳಿಗ್ಗೆ 4 ಗಂಟೆಯಿಂದ ರೋಗಿಗಳು ಆಸ್ಪತ್ರೆಗೆ ಬರಲು ಪ್ರಾರಂಭಿಸಿದ್ದರು ಎಂದು ವೈದ್ಯಕೀಯ ಅಧಿಕಾರಿ ಡಾ. ರುಬಿನಾ ಹೇಳಿದರು.
"ತುರ್ತು ಚಿಕಿತ್ಸಾ ಕೊಠಡಿಗಳು ನೀರಿನಿಂದ ತುಂಬಿ ಹೋಗಿದ್ದವು. ಎಲ್ಲ ಬೆಡ್ ಗಳಲ್ಲಿ ರೋಗಿಗಳು ದಾಖಲಾಗಿದ್ದರು. ಪೂರೈಕೆಯಾದ ಅಗತ್ಯ ವಸ್ತುಗಳು ಮುಗಿಯುವ ಹಂತದಲ್ಲಿತ್ತು. ಆದರೆ ಯಾವುದೇ ರೋಗಿಯನ್ನು ವಾಪಸ್ ಕಳುಹಿಸಲಿಲ್ಲ. ಆಸ್ಪತ್ರೆಯ ಎಲ್ಲಾ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಇತರ ಸಿಬ್ಬಂದಿ ಗಾಯಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಅವರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುತ್ತಿದ್ದರು" ಎಂದು ವೈದ್ಯಕೀಯ ಅಧಿಕಾರಿ ಡಾ. ರುಬಿನಾ ಹೇಳಿದರು.
ರುಬಿನಾ ಮಾತ್ರವಲ್ಲದೆ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಆಗಿರುವ ಅವರ ಪತಿ ಕೂಡ ಗಾಯಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮರೋಪಾದಿಯಲ್ಲಿ ಕೆಲಸ ಮಾಡಿದರು.