ಮಧ್ಯಪ್ರದೇಶ | ಖಾಂಡ್ವಾ ಸರಕಾರಿ ಆಸ್ಪತ್ರೆಯ ಹಾಸಿಗೆಗಳ ಮೇಲೆ ಮಲಗಿದ್ದ ನಾಯಿ: ಉದ್ಯೋಗಿ ವಜಾ
ಸಾಂದರ್ಭಿಕ ಚಿತ್ರ
ಖಾಂಡ್ವಾ (ಮಧ್ಯ ಪ್ರದೇಶ): ಖಾಂಡ್ವಾ ಜಿಲ್ಲೆಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ಹಾಸಿಗೆಯ ಮೇಲೆ ನಾಯಿಗಳು ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಿಗೇ ಓರ್ವ ಸ್ವಚ್ಛತಾ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಈ ಘಟನೆಯ ವಿರುದ್ಧ ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆಯು ಕಿಲ್ಲೌದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ತಕ್ಷಣದಿಂದಲೇ ಅನ್ವಯವಾಗುವಂತೆ ಓರ್ವ ಸ್ವಚ್ಛತಾ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿರುವ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಧರ್ಮೇಂದ್ರ ಶರ್ಮ, ಓರ್ವ ಕರ್ತವ್ಯನಿರತ ಶುಶ್ರೂಷಕಿಯ ಏಳು ದಿನಗಳ ವೇತನವನ್ನು ಕಡಿತಗೊಳಿಸಲೂ ಆದೇಶಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
“ಈ ಲೋಪಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆರೋಗ್ಯ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ” ಎಂದು ಜಿಲ್ಲಾಧಿಕಾರಿ ರಿಷವ್ ಗುಪ್ತ ಸುದ್ದಿಗಾರರಿಗೆ ತಿಳಿಸಿದ್ದಾರೆ.