×
Ad

ಮನೆಗೆ ಧಾವಿಸಬೇಡಿ, ಸುರಕ್ಷಿತ ಸ್ಥಳಗಳಲ್ಲಿ ಉಳಿಯಿರಿ: ಗಡಿ ಗ್ರಾಮಗಳ ನಿವಾಸಿಗಳಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಲಹೆ

Update: 2025-05-11 22:09 IST

Photo Credit: PTI

ಶ್ರೀನಗರ: ಪಾಕಿಸ್ತಾನವು ಗಡಿಯಾಚೆಯಿಂದ ಶೆಲ್ ದಾಳಿ ನಡೆಸಿದ್ದರಿಂದಾಗಿ, ಗಡಿ ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರವುಗೊಳಿಸಿದ್ದ ಜಮ್ಮು ಮತ್ತು ಕಾಶ್ಮೀರ ಪ್ರಾಧಿಕಾರಗಳು, ಈ ಪ್ರದೇಶಗಳನ್ನು ಇನ್ನೂ ಸ್ವಚ್ಛಗೊಳಿಸಬೇಕಿರುವುದರಿಂದ ತಕ್ಷಣವೇ ನಿಮ್ಮ ಮನೆಗಳಿಗೆ ಧಾವಿಸಬೇಡಿ ಎಂದು ಸಲಹೆ ನೀಡಿವೆ.

ಇನ್ನೂ ಪತ್ತೆಯಾಗದ ಶೆಲ್ ಗಳಿರುವ ಪ್ರದೇಶಗಳನ್ನು ತೆರವುಗೊಳಿಸಬೇಕಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಬಾರಾಮುಲ್ಲಾ, ಬಂಡಿಪೋರ ಹಾಗೂ ಕುಪ್ವಾರ ಜಿಲ್ಲೆಗಳಲ್ಲಿನ ಗ್ರಾಮಗಳನ್ನು ಪಾಕಿಸ್ತಾನದ ಶೆಲ್ ದಾಳಿ ಗುರಿಯಾಗಿಸಿಕೊಂಡಿದ್ದುದರಿಂದ, ಈ ಗ್ರಾಮಗಳ ನಿವಾಸಿಗಳ ವಾಸ್ತವ್ಯಗಳಿಗೆ ತೀವ್ರ ಸ್ವರೂಪದ ಅಪಾಯವುಂಟಾಗುವ ಸಾಧ್ಯತೆ ಎದುರಾಗಿತ್ತು. ಹೀಗಾಗಿ, ಸುಮಾರು 1.25 ಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.

ಈ ಸಂಬಂಧ ಸಲಹಾಸೂಚಿಯನ್ನು ಬಿಡುಗಡೆ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, “ ಗ್ರಾಮಗಳಿಗೆ ಮರಳಬೇಡಿ. ಪಾಕಿಸ್ತಾನದ ಶೆಲ್ ದಾಳಿಯ ನಂತರ, ಸ್ಫೋಟಗೊಳ್ಳದ ಮದ್ದುಗುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಜೀವಗಳಿಗೆ ಅಪಾಯವುಂಟಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದ್ದಾರೆ.

ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಬಾಂಬ್ ನಿಷ್ಕ್ರಿಯ ದಳಗಳನ್ನು ರವಾನಿಸಲಾಗುವುದು. ಮಾನವರ ಜೀವ ಹಾನಿಗೆ ಕಾರಣವಾಗಬಹುದಾದ ಇನ್ನೂ ಪತ್ತೆಯಾಗದ ಯಾವುದಾದರೂ ಶೆಲ್ ಗಳಿರುವ ಗ್ರಾಮಗಳನ್ನು ತೆರವುಗೊಳಿಸಲಾಗುವುದು ಎಂದು ಈ ಸಲಹಾಸೂಚಿಯಲ್ಲಿ ಹೇಳಲಾಗಿದೆ.

“2023 ಒಂದರಲ್ಲೇ ಗಡಿ ನಿಯಂತ್ರಣ ರೇಖೆಯ ಬಳಿ ಉಳಿದು ಹೋಗಿದ್ದ ಶೆಲ್ ಗಳು ಸ್ಫೋಟಗೊಂಡು ಸುಮಾರು 41 ಮಂದಿ ಮೃತಪಟ್ಟಿದ್ದರು” ಎಂದೂ ಸಲಹಾಸೂಚಿಯಲ್ಲಿ ಹೇಳಲಾಗಿದ್ದು, ನಾಗರಿಕರು ಮತ್ತೆ ತಮ್ಮ ಗ್ರಾಮಗಳಿಗೆ ಧಾವಿಸುವುದರಿಂದ ಆಗಬಹುದಾದ ಅಪಾಯಗಳನ್ನು ಒತ್ತಿ ಹೇಳಿದೆ.

ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಕಳೆದ ಬುಧವಾರ ಮುಂಜಾನೆ ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಭತ್ತು ಭಯೋತ್ಪಾದಕ ಶಿಬಿರಗಳ ಮೇಲೆ ವಾಯು ದಾಳಿ ನಡೆಸಿ, ಅವನ್ನು ಧ್ವಂಸಗೊಳಿಸಿತ್ತು. ಈ ಕ್ರಮಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡಾ ಗಡಿಯಾಚೆಯಿಂದ ಶೆಲ್ ದಾಳಿ ನಡೆಸಿದ್ದರಿಂದಾಗಿ, ಬುಧವಾರದಿಂದ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 25 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಪೂಂಛ್ ಜಿಲ್ಲೆಯೊಂದರಲ್ಲೇ 18 ಮಂದಿ ಸಾವಿಗೀಡಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News