×
Ad

ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮರನ್ನೂ ಅನುಮಾನದಿಂದ ನೋಡಬೇಡಿ: ಸಿಎಂ ಉಮರ್ ಅಬ್ದುಲ್ಲಾ

Update: 2025-11-18 15:59 IST

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ (Photo: PTI)

ಶ್ರೀನಗರ: ದಿಲ್ಲಿ ಸ್ಫೋಟಕ್ಕೆ ಕಾರಣರಾಗಿರುವ ಎಲ್ಲರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಇದರ ಹೆಸರಿನಲ್ಲಿ ಅಮಾಯಕ ನಾಗರಿಕರನ್ನು ಅನುಮಾನದಲ್ಲಿ ನೋಡುವುದನ್ನು ತಪ್ಪಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದ್ದಾರೆ.

ನೌಗಮ್ ಪೊಲೀಸ್ ಠಾಣೆಯ ಸುತ್ತಮುತ್ತ ನಡೆದ ಆಕಸ್ಮಿಕ ಸ್ಫೋಟದಲ್ಲಿ ಗಾಯಗೊಂಡವರನ್ನು ಮಂಗಳವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಮಾತನಾಡಿದ ಸಿಎಂ ಉಮರ್ ಅಬ್ದುಲ್ಲಾ ಅವರು, “ಜಮ್ಮು-ಕಾಶ್ಮೀರದ ಪ್ರತಿಯೊಬ್ಬ ನಾಗರಿಕನನ್ನೂ, ವಿಶೇಷವಾಗಿ ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮರನ್ನೂ ಅನುಮಾನದಿಂದ ನೋಡಬೇಡಿ ಎಂದು ನಾನು ಕೇಂದ್ರ ಗೃಹ ಸಚಿವರು ಮತ್ತು ಉತ್ತರ ವಲಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಈ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ರೀತಿಯ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.

ಉಮರ್ ಅಬ್ದುಲ್ಲಾ ಕಳೆದ ವಾರ ದಿಲ್ಲಿ ಸ್ಫೋಟದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದು, “ರಾಜ್ಯದ ಸಮಗ್ರ ಜನಸಂಖ್ಯೆಯನ್ನು ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿದವರಂತೆ ಚಿತ್ರಿಸುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದ್ದರು.

ಭಯೋತ್ಪಾದನಾ ಜಾಲದಲ್ಲಿ ಭಾಗಿಯಾಗಿರುವವರಿಗೆ ಕಟ್ಟುನಿಟ್ಟಿನ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ ಉಮರ್ ಅವರು, “ಹಿಂಸಾಚಾರದ ವಿರುದ್ಧ ಸದಾ ಧ್ವನಿ ಎತ್ತಿರುವ ನಿರಪರಾಧ ಜನರನ್ನು ಆರೋಪಿಗಳಂತೆ ನೋಡಬಾರದು” ಎಂದರು.

ನ. 10 ರಂದು ದಿಲ್ಲಿಯ ಕೆಂಪು ಕೋಟೆ ಬಳಿ ದಕ್ಷಿಣ ಕಾಶ್ಮೀರದ ಪುಲ್ವಾಮಾದ ಡಾ. ಉಮರ್ ನಬಿ ಚಾಲನೆ ಮಾಡುತ್ತಿದ್ದ ಸ್ಫೋಟಕಗಳಿಂದ ತುಂಬಿದ ಕಾರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದರು.

"ನೌಗಮ್ ಸ್ಫೋಟ ಹೇಗೆ ಸಂಭವಿಸಿತು, ಏನು ಕಾರಣ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇಷ್ಟು ಪ್ರಮಾಣದ ಸ್ಫೋಟಕಗಳನ್ನು ಹೇಗೆ ತರಲಾಯಿತು, ಯಾವ ಪರಿಸ್ಥಿತಿಯಲ್ಲಿ ಸಂಗ್ರಹಿಸಲಾಯಿತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ” ಎಂದು ಸಿಎಂ ಉಮರ್ ಹೇಳಿದ್ದಾರೆ.

ಸ್ಫೋಟದ ನಂತರ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ವೈದ್ಯಕೀಯ ಸಿಬ್ಬಂದಿಯನ್ನು ಅವರು ಪ್ರಶಂಸಿಸಿದರು. “ಅವರು ಯಾವುದೇ ಸೂಚನೆಗಾಗಿ ಕಾಯಲಿಲ್ಲ. ಸ್ಫೋಟವನ್ನು ಕಂಡ ತಕ್ಷಣ ಆಂಬ್ಯುಲೆನ್ಸ್ ತಂದರು”, ಎಂದು ಉಮರ್ ಅಬ್ದುಲ್ಲಾ ಶ್ಲಾಘಿಸಿದರು.

ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಈಗಾಗಲೇ ಪರಿಹಾರ ಘೋಷಿಸಲಾಗಿದೆ. ಸ್ಫೋಟದಲ್ಲಿ ಸಾವನ್ನಪ್ಪಿದ ದರ್ಜಿ ಮಮ್ಮದ್ ಶಫಿ ಪ್ಯಾರೆಯವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಅನುಮೋದಿಸಲಾಗುವುದು ಎಂದು ಹೇಳಿದರು.

ನೌಗಮ್‌ನಲ್ಲಿ ನಡೆದ ಈ ಆಕಸ್ಮಿಕ ಸ್ಫೋಟದಲ್ಲಿ ಐದು ಪೊಲೀಸ್ ಸಿಬ್ಬಂದಿ ಮತ್ತು ನಾಲ್ವರು ನಾಗರಿಕರು ಸೇರಿದಂತೆ ಒಂಭತ್ತು ಮಂದಿ ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News