×
Ad

"ಮುಸ್ಲಿಮರು ಅಥವಾ ಕಾಶ್ಮೀರಿಗಳ ವಿರುದ್ಧ ಜನತೆ ಇರಬೇಕು ಎಂದು ಬಯಸುವುದಿಲ್ಲ": ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ಪತ್ನಿಯ ಹೇಳಿಕೆ

Update: 2025-05-02 08:00 IST

PC: screengrab/ x.com/ANI

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಏಪ್ರಿಲ್ 22ರ ದಾಳಿಯಲ್ಲಿ ಮೃತಪಟ್ಟ 26 ಮಂದಿಯ ಪೈಕಿ ಒಬ್ಬರಾದ ನೌಕಾಪಡೆ ಅಧಿಕಾರಿ  ಹಿಮಾಂಶಿ ನರ್ವಾಲ್, ಪಹಲ್ಗಾಮ್ ದಾಳಿ ವಿರೋಧಿಸಿ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶಾಂತಿಗಾಗಿ ಮನವಿ ಮಾಡಿದ್ದಾರೆ.

"ಮುಸ್ಲಿಮರು ಅಥವಾ ಕಾಶ್ಮೀರಿಗಳ ವಿರುದ್ಧ ಜನತೆ ಇರಬೇಕು ಎಂದು ಬಯಸುವುದಿಲ್ಲ. ನಾವು ಬಯಸುವುದು ಶಾಂತಿಯನ್ನು ಮಾತ್ರ. ನಮಗೆ ನ್ಯಾಯ ಬೇಕು" ಎಂದು ಗುರುಗ್ರಾಮದ ಪಿಎಚ್ ಡಿ ಪದವೀಧರೆಯಾಗಿರುವ ಹಿಮಾಂಶಿ ಹೇಳಿಕೆ ನೀಡಿರುವ ವಿಡಿಯೊವನ್ನು ಎಎನ್ ಐ ಸುದ್ದಿಸಂಸ್ಥೆ ಬಿಡುಗಡೆ ಮಾಡಿದೆ.

ದಾಳಿಯಲ್ಲಿ ಮೃತಪಟ್ಟ ಲೆಫ್ಟಿನೆಂಟ್ ನರ್ವಾಲ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಸ್ವೀಕರಿಸಲಾಯಿತು. ಕುಟುಂಬ ಸದಸ್ಯರು, ನೌಕಾಪಡೆ ಅಧಿಕಾರಿಗಳು, ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿ ಮತ್ತು ದೆಹಲಿ ಸಿಎಂ ರೇಖಾ ಗುಪ್ತ ಸೇರಿದಂತೆ ಹಲವು ಮಂದಿ ರಾಜಕೀಯ ಮುಖಂಡರು ಶವಪೆಟ್ಟಿಗೆಯನ್ನು ಸ್ವೀಕರಿಸಿದರು.

ಪತಿಯ ಶವಪೆಟ್ಟಿಗೆಯನ್ನು ತಬ್ಬಿಕೊಂಡು ಸೆಲ್ಯೂಟ್ ನೀಡುವ ಮೂಲಕ ಗೌರವ ಸಮರ್ಪಿಸುವ ವೇಳೆ ಹಿಮಾಂಶಿಯವರ ಕಣ್ಣೀರು ಕಟ್ಟೆಯೊಡೆಯಿತು. "ಅವರ ಆತ್ಮಕ್ಕೆ ಶಾಂತಿ ಸಿಕ್ಕಲಿ. ಅವರು ಒಳ್ಳೆಯ ಜೀವನ ನಡೆಸಿದರು. ನಮ್ಮನ್ನು ನಿಜವಾಗಿಯೂ ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ಗೌರವವನ್ನು ಸದಾ ಎತ್ತಿಹಿಡಿಯುತ್ತೇವೆ" ಎಂದು ಅವರು ಕಣ್ಣೀರು ಸುರಿಸುತ್ತಾ ನುಡಿದರು.

ಕೇವಲ ಕೆಲ ದಿನಗಳ ಹಿಂದೆ ಅಂದರೆ ಏಪ್ರಿಲ್16ರಂದು ವಿವಾಹವಾಗಿದ್ದ ಈ ಜೋಡಿ ಮಧುಚಂದ್ರಕ್ಕಾಗಿ ಪಹಲ್ಗಾಮ್ ಗೆ ತೆರಳಿತ್ತು. ನರ್ವಾಲ್ ಅವರ ಹುಟ್ಟೂರಾದ ಹರ್ಯಾಣದ ಕರ್ನಾಲ್ ನಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಬುಧವಾರ ಸಂಜೆ ಅಂತ್ಯಕ್ರಿಯೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News