ವರದಕ್ಷಿಣೆ ದೂರು | ಪತಿಗೆ ಸುಪ್ರೀಂಕೋರ್ಟ್ ನಿಂದ ರಕ್ಷಣೆ, ಪತ್ನಿ ಐಪಿಎಸ್ ಅಧಿಕಾರಿಗೆ ಕ್ಷಮೆ ಯಾಚನೆಗೆ ಸೂಚನೆ
ಹೊಸದಿಲ್ಲಿ: ವರದಕ್ಷಿಣೆ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿಯ ಪತಿ ಮತ್ತು ಅವರ ಕುಟುಂಬವನ್ನು ಬಂಧಿಸದಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತಾತ್ಕಾಲಿಕ ರಕ್ಷಣೆಯನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಮಹಿಳಾ ಐಪಿಎಸ್ ಅಧಿಕಾರಿ ಶಿವಾಂಗಿ ಬನ್ಸಾಲ್/ ಗೋಯಲ್ ಅವರು ನೀಡಿದ್ದ ದೂರು ಕುರಿತಂತೆ 2022 ರಿಂದ ನಡೆಯುತ್ತಿರುವ ನ್ಯಾಯಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮನೀಶ್ ಅವರು ಒಳಗೊಂಡ ಪೀಠ ಈ ತೀರ್ಪು ನೀಡಿದ್ದು, ವಿವಾದಿತ ದಂಪತಿಯ ವೈಯಕ್ತಿಕ ಕಲಹವನ್ನು ಪರಸ್ಪರ ಮಾತುಕತೆಯ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ. ಜೊತೆಗೆ, ಸಂವಿಧಾನದ 142ನೇ ವಿಧಿಯ ಅನುಸಾರ, ಈ ವಿವಾಹವನ್ನು ರದ್ದುಗೊಳಿಸಿಕೊಳ್ಳಬಹುದೆಂದು ಸೂಚನೆ ನೀಡಿದೆ.
ಈ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿದ 2022ರ ತೀರ್ಪಿನಲ್ಲಿ ವಿವರಿಸಲಾದ ಪ್ಯಾರಾಗ್ರಾಫ್ 32 ರಿಂದ 38ರವರೆಗೆ ನೀಡಿರುವ ಮಾರ್ಗಸೂಚಿಯಂತೆ, ಭಾರತೀಯ ದಂಡಸಂಹಿತೆಯ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ನ ದುರ್ಬಳಕೆಯನ್ನು ತಡೆಯುವ ಸಲುವಾಗಿ ಕುಟುಂಬ ಕಲ್ಯಾಣ ಸಮಿತಿಗಳನ್ನು ತಕ್ಷಣ ರಚಿಸಬೇಕೆಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.
ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯ ಪತಿ 109 ದಿನಗಳ ಕಾಲ ಮತ್ತು ಅವರ ತಂದೆ 103 ದಿನಗಳ ಕಾಲ ಜೈಲಿನಲ್ಲಿದ್ದರು. ಇದರೊಂದಿಗೆ ಅವರ ಕುಟುಂಬವು ತೀವ್ರ ಮಾನಸಿಕ ಆಘಾತ ಮತ್ತು ಕಿರಿಕಿರಿಯನ್ನು ಅನುಭವಿಸಿತ್ತು. ಈ ಹಿನ್ನಲೆಯಲ್ಲಿ, ದೂರು ದಾಖಲಿಸಿದ ಮಹಿಳಾ ಐಪಿಎಸ್ ಅಧಿಕಾರಿ ಪತ್ರಿಕಾ ಪ್ರಕಟಣೆಯ ಮೂಲಕ ಕ್ಷಮೆ ಯಾಚಿಸಬೇಕೆಂದು ಕೋರ್ಟ್ ಸ್ಪಷ್ಟಪಡಿಸಿದೆ.