ಕುಡಿದು ವಾಹನ ಚಾಲನೆ ಪ್ರಕರಣ: ನಟ ದಲೀಪ್ ತಾಹಿಲ್‌ಗೆ ಎರಡು ವರ್ಷಗಳ ಜೈಲುಶಿಕ್ಷೆ
Update: 2023-10-22 22:35 IST
Photo:instagram/daliptahil
ಮುಂಬೈ: ಇಲ್ಲಿಯ ಬಾಂದ್ರಾದ ಹೆಚ್ಚುವರಿ ಮಹಾನಗರ ನ್ಯಾಯಾಲಯವು ಮದ್ಯ ಸೇವಿಸಿ ವಾಹನ ಚಲಾಯಿಸಿದ್ದ 2018ರ ಪ್ರಕರಣದಲ್ಲಿ ನಟ ದಲೀಪ್ ತಾಹಿಲ್‌ಗೆ ಎರಡು ವರ್ಷಗಳ ಜೈಲುಶಿಕ್ಷೆ ಮತ್ತು 500 ರೂ.ದಂಡವನ್ನು ವಿಧಿಸಿದೆ.
ಗಾಯಾಳು ಮಹಿಳೆಗೆ 5,000 ರೂ.ಗಳ ಪರಿಹಾರವನ್ನು ಪಾವತಿಸುವಂತೆಯೂ ನ್ಯಾಯಾಲಯವು ತಾಹಿಲ್‌ಗೆ ಆದೇಶಿಸಿದೆ.
ಈ ನಡುವೆ, ತೀರ್ಪನ್ನು ತಾನು ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಾಹಿಲ್ ನಿವೇದಿಸಿಕೊಂಡಿದ್ದು, ಅದಕ್ಕಾಗಿ ಮಹಾನಗರ ನ್ಯಾಯಾಲಯವು ಅವರಿಗೆ ಒಂದು ತಿಂಗಳ ಸಮಯಾವಕಾಶವನ್ನು ನೀಡಿತು.
‘ನ್ಯಾಯಾಧೀಶರನ್ನು ಮತ್ತು ನ್ಯಾಯಾಲಯದ ತೀರ್ಪನ್ನು ನಾನು ಗೌರವಿಸುತ್ತೇನೆ. ಇಡೀ ತೀರ್ಪನ್ನು ನಾವು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ. ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ನಾನು ಯಾರನ್ನೂ ಗಾಯಗೊಳಿಸಿರಲಿಲ್ಲ’ ಎಂದು ತಾಹಿಲ್ ಸುದ್ದಿಗಾರರಿಗೆ ತಿಳಿಸಿದರು.