×
Ad

‘ಡಂಕಿ ರೂಟ್’ ನಲ್ಲಿ ಅಪಾಯಕಾರಿ ಹಾವುಗಳು, ಮೊಸಳೆಗಳು...

Update: 2025-02-17 20:12 IST

PC : PTI 

ಚಂಡಿಗಡ: ತನ್ನ ಮತ್ತು ಕುಟುಂಬದ ಉತ್ತಮ ಬದುಕಿನ ಕನಸಿನೊಂದಿಗೆ ಅಮೆರಿಕಕ್ಕೆ ತೆರಳಿದ್ದ ಪಂಜಾಬಿನ ಮಂದೀಪ್ ಸಿಂಗ್ ಅಲ್ಲಿಂದ ಗಡಿಪಾರುಗೊಂಡು ಶನಿವಾರ ರಾತ್ರಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಏಜೆಂಟ್ ಆತನಿಗೆ ಅಮೆರಿಕಕಕ್ಕೆ ಕಾನೂನು ಬದ್ಧ ಪ್ರವೇಶದ ಭರವಸೆಯನ್ನು ನೀಡಿದ್ದ. ಆದರೆ ‘ಡಂಕಿ ರೂಟ್’ ಮೂಲಕ ಸಾಗುಹಾಕಿದ್ದ. ಹಾವು, ಮೊಸಳೆಗಳಿಂದ ಕೂಡಿದ್ದ ಅಪಾಯಕಾರಿ ಮಾರ್ಗದಲ್ಲಿ ಮಂದೀಪ್ ಬದುಕಿ ಬಂದಿದ್ದೇ ದೊಡ್ಡದು.

ಜ.27ರಂದು ಮೆಕ್ಸಿಕೋದ ಟಿಜುವಾನಾದ ಮೂಲಕ ಅಮೆರಿಕದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಯುಎಸ್ ಗಡಿ ಗಸ್ತು ಪಡೆಯಿಂದ ಬಂಧಿಸಲ್ಪಟ್ಟಾಗ ಮಂದೀಪ್‌ ನ ಎಲ್ಲ ಕನಸುಗಳು ಭಗ್ನಗೊಂಡಿದ್ದವು.

ಮಂದೀಪ್ ಸೇರಿದಂತೆ 116 ಭಾರತೀಯರ ತಂಡವು ಗಡಿಪಾರುಗೊಂಡು ಶನಿವಾರ ತಡರಾತ್ರಿ ಯುಎಸ್ ಮಿಲಿಟರಿ ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದಿತ್ತು. ಗಡಿಪಾರುಗೊಂಡ 112 ಭಾರತೀಯರ ಮೂರನೇ ತಂಡ ರವಿವಾರ ರಾತ್ರಿ ಅಮೃತಸರಕ್ಕೆ ಆಗಮಿಸಿದೆ. ಮೊದಲ ತಂಡ ಫೆ.5ರಂದು ಬಂದಿತ್ತು.

‘ಕಾನೂನುಬದ್ಧ ಮಾರ್ಗದ ಮೂಲಕ ನನ್ನನ್ನು ಅಮೆರಿಕಕ್ಕೆ ಕರೆದೊಯ್ಯುವುದಾಗಿ ಏಜೆಂಟ್ ಭರವಸೆ ನೀಡಿದ್ದ. ಇದಕ್ಕಾಗಿ ಆತ 40 ಲಕ್ಷ ರೂ.ಗಳನ್ನು ಕೇಳಿದ್ದು, ಎರಡು ಕಂತುಗಳಲ್ಲಿ ಅದನ್ನು ಪಾವತಿಸಿದ್ದೆ. ಕಳೆದ ಆಗಸ್ಟ್‌ನಲ್ಲಿ ಅಮೃತಸರದಿಂದ ದಿಲ್ಲಿಗೆ ವಿಮಾನದಲ್ಲಿ ತೆರಳುವ ಮೂಲಕ ನನ್ನ ಪಯಣ ಆರಂಭಗೊಂಡಿತ್ತು. ದಿಲ್ಲಿಯಿಂದ ಮುಂಬೈಗೆ,ಅಲ್ಲಿಂದ ನೈರೋಬಿಗೆ,ಬಳಿಕ ಇನ್ನೊಂದು ದೇಶದ ಮೂಲಕ ಆಮ್ಸ್ಟರ್ ಡ್ಯಾಮ್‌ ಗೆ ಮತ್ತು ಅಲ್ಲಿಂದ ಸುರಿನಾಮ್‌ ಗೆ ನನ್ನನ್ನು ಕರೆದೊಯ್ಯಲಾಗಿತ್ತು. ಅಲ್ಲಿ ಸಬ್-ಏಜೆಂಟ್‌ ಗಳು 20 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದು, ಅದನ್ನು ಊರಿನಲ್ಲಿ ನನ್ನ ಕುಟುಂಬವು ಪಾವತಿಸಿತ್ತು’ ಎಂದು ಸುದ್ದಿಗಾರೊಂದಿಗೆ ಮಾತನಾಡಿದ ಮಂದೀಪ್ ತಿಳಿಸಿದರು. ಈ ಸಂದರ್ಭದಲ್ಲಿ ಆತ ಏಜೆಂಟ್ ಮತ್ತು ಸಬ್-ಏಜೆಂಟ್‌ಗಳ ಮೂಲಕ ‘ಡಂಕಿ ರೂಟ್’ನ ತನ್ನ ಅಪಾಯಕಾರಿ ಪ್ರಯಾಣದ ಹಲವಾರು ವೀಡಿಯೊಗಳನ್ನು ಸುದ್ದಿಗಾರರಿಗೆ ತೋರಿಸಿದರು.

ಸುರಿನಾಮ್‌ ನಿಂದ ಮಂದೀಪ್‌ ರ ಅನಿಶ್ಚಿತ ಪ್ರಯಾಣ ಆರಂಭಗೊಂಡಿತ್ತು. ಅಲ್ಲಿ ಮಂದೀಪ್ ಮತ್ತು ಅವರಂತೆ ಅಮೆರಿಕದ ಕನಸು ಕಂಡಿದ್ದ ಇನ್ನೂ ಅನೇಕರನ್ನು ವಾಹನವೊಂದರಲ್ಲಿ ಹತ್ತಿಸಿ ಗಯಾನಾಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಹಲವು ದಿನಗಳ ನಿರಂತರ ಪ್ರಯಾಣದ ಮೂಲಕ ಬೊಲಿವಿಯಾ ಮೂಲಕ ಈಕ್ವೆಡಾರ್‌ ಗೆ ತಲುಪಿಸಲಾಗಿತ್ತು. ಬಳಿಕ ಅವರು ಕಾಲ್ನಡಿಗೆಯಲ್ಲಿ ಪನಾಮಾ ಕಾಡುಗಳನ್ನು ದಾಟುವಂತೆ ಮಾಡಲಾಗಿತ್ತು.

‘ನಾವು ಅತಿಯಾಗಿ ಪ್ರಶ್ನೆಗಳನ್ನು ಕೇಳಿದರೆ ನಮ್ಮನ್ನು ಗುಂಡಿಕ್ಕಿ ಕೊಲ್ಲಬಹುದು ಎಂದು ಸಹಪ್ರಯಾಣಿಕರು ನಮಗೆ ತಿಳಿಸಿದ್ದರು. 13 ದಿನಗಳ ಕಾಲ 12 ಕಾಲುವೆಗಳನ್ನು ಒಳಗೊಂಡಿದ್ದ ಅಪಾಯಕಾರಿ ಮಾರ್ಗದಲ್ಲಿ ನಾವು ಸಾಗಿದ್ದೆವು. ದಾರಿಯಲ್ಲಿ ಮೊಸಳೆಗಳು, ಹಾವುಗಳು ಹೀಗೆ ಎಲ್ಲವನ್ನೂ ನಾವು ಸಹಿಸಿಕೊಳ್ಳಬೇಕಿತ್ತು. ಅಪಾಯಕಾರಿ ಸರೀಸೃಪಗಳನ್ನು ಎದುರಿಸಲು ಕೆಲವರಿಗೆ ಕೋಲುಗಳನ್ನೂ ನೀಡಲಾಗಿತ್ತು. ಸರಿಯಾದ ಆಹಾರ ಸಿಗುವುದು ದೂರದ ಮಾತಾಗಿದ್ದರಿಂದ ಅರೆಬೆಂದ ರೊಟ್ಟಿಗಳನ್ನು , ಕೆಲವೊಮ್ಮೆ ನೂಡಲ್‌ಗಳನ್ನು ತಿಂದು ಹಸಿವನ್ನು ತಣಿಸಿಕೊಂಡಿದ್ದೆವು. ನಾವು ದಿನವೊಂದಕ್ಕೆ 12 ಗಂಟೆಗಳ ಕಾಲ ನಡೆಯುತ್ತಿದ್ದೆವು’ ಎಂದು ಮಂದೀಪ್ ವಿವರಿಸಿದರು.

ಪನಾಮಾ ದಾಟಿದ ಬಳಿಕ ಗುಂಪು ಕೋಸ್ಟಾರಿಕಾದಲ್ಲಿ ತಂಗಿತ್ತು ಮತ್ತು ನಂತರ ಹೊಂಡುರಾಸ್‌ ಗೆ ಪ್ರಯಾಣವನ್ನು ಆರಂಭಿಸಿತ್ತು. ಅಲ್ಲಿ ಅವರಿಗೆ ತಿನ್ನಲು ಸ್ಪಲ್ಪ ಅನ್ನ ಸಿಕ್ಕಿತ್ತು. ಆದರೆ ನಿಕಾರಾಗುವಾದ ಮೂಲಕ ದಾಟುವಾಗ ಅವರಿಗೆ ತಿನ್ನಲು ಏನೂ ಸಿಕ್ಕಿರಲಿಲ್ಲ. ಆದರೂ ಅದೃಷ್ಟವಶಾತ್ ಗ್ವಾಟೆಮಾಲಾದಲ್ಲಿ ಸ್ವಲ್ಪ ಮೊಸರು ಸಿಕ್ಕಿತ್ತು. ಟುಜುವಾನಾ ತಲುಪುವ ಹತ್ತಿಗೆ ಮಂದೀಪ್ ಗಡ್ಡವನ್ನು ಬಲವಂತದಿಂದ ಕತ್ತರಿಸಲಾಗಿತ್ತು.

ಜ.27ರಂದು ಬೆಳಿಗ್ಗೆ ಅವರನ್ನೆಲ್ಲ ಗಡಿಯನ್ನು ದಾಟಿ ಅಮೆರಿಕದೊಳಗೆ ನುಸುಳುವಂತೆ ಸೂಚಿಸಲಾಗಿತ್ತು. ಆ ಪ್ರಯತ್ನದಲ್ಲಿದ್ದಾಗಲೇ ಅಮೆರಿಕದ ಗಡಿ ಗಸ್ತು ಪೋಲಿಸರು ಅವರನ್ನು ಬಂಧಿಸಿದ್ದರು.

‘ನಮ್ಮನ್ನು ಗಡಿಪಾರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ನಮ್ಮನ್ನು ಭಾರತಕ್ಕೆ ವಾಪಸ್ ಕಳುಹಿಸುವ ಮುನ್ನ ಕೆಲವು ದಿನಗಳ ಕಾಲ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು’ ಎಂದು ಮಂದೀಪ್ ಹೇಳಿದರು.   

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News