ಕೇರಳ ವಿವಾದಕ್ಕೆ ಕಾರಣವಾದ ರಾಷ್ಟ್ರಪತಿಗಳ ಶಬರಿಮಲೆ ಭೇಟಿಯ ಕುರಿತು ಡಿವೈಎಸ್ಪಿಯ ವಾಟ್ಸ್‌ಆ್ಯಪ್ ಪೋಸ್ಟ್
ರಾಷ್ಟ್ರಪತಿ ದ್ರೌಪದಿ ಮುರ್ಮು | Photo Credit : ANI
ತ್ರಿಶೂರ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಶಬರಿಮಲೆ ದೇವಾಲಯದ ಭೇಟಿಯನ್ನು ಟೀಕಿಸಿ ಅಲತ್ತೂರು ಉಪವಿಭಾಗದ ಡಿವೈಎಸ್ಪಿ ಆರ್. ಮನೋಜ್ ಕುಮಾರ್ ಹಾಕಿದ್ದ ವಾಟ್ಸ್‌ಆ್ಯಪ್ ಸ್ಟೇಟಸ್ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಜಿತ್ ಕುಮಾರ್ ಅವರು ಡಿವೈಎಸ್ಪಿಯಿಂದ ಸ್ಪಷ್ಟೀಕರಣವನ್ನು ಕೇಳಿದ್ದಾರೆ ಎಂದು thehindu.com ವರದಿ ಮಾಡಿದೆ.
ಅಕ್ಟೋಬರ್ 22ರಂದು ರಾಷ್ಟ್ರಪತಿಗಳು ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಡಿವೈಎಸ್ಪಿ ಮನೋಜ್ ಕುಮಾರ್ ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ “ರಾಷ್ಟ್ರಪತಿಗಳು ದೇವಾಲಯದ ಸಂಪ್ರದಾಯಗಳನ್ನು ಉಲ್ಲಂಘಿಸಿದ್ದಾರೆ. ಸಮವಸ್ತ್ರದಲ್ಲಿದ್ದ ಭದ್ರತಾ ಸಿಬ್ಬಂದಿಯೂ ಈ ಉಲ್ಲಂಘನೆಗೆ ಸಹಕರಿಸಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು.
ಅವರು ಪೋಸ್ಟ್‌ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳತ್ತ ಪ್ರಶ್ನೆ ಎತ್ತುತ್ತಾ, “ಇಂತಹ ಸಂದರ್ಭದಲ್ಲಿ ‘ನಾಮ ಜಪಂ’ ಏಕೆ ನಡೆಯಲಿಲ್ಲ?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, “ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಥವಾ ಅವರ ಸಂಪುಟದ ಸದಸ್ಯರು ಇದೇ ರೀತಿ ವರ್ತಿಸಿದ್ದರೆ ಅದರ ಪರಿಣಾಮ ಹೇಗಿರುತ್ತಿತ್ತೋ?” ಎಂದು ಪ್ರಶ್ನಿಸಿದ್ದಾರೆ.
ಪೋಸ್ಟ್ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಮನೋಜ್ ಕುಮಾರ್ ತಕ್ಷಣವೇ ಅದನ್ನು ಅಳಿಸಿ ಹಾಕಿದ್ದು, “ರೈಲು ಪ್ರಯಾಣದ ವೇಳೆ ಅಜಾಗರೂಕತೆಯಿಂದ ಫಾರ್ವರ್ಡ್ ಮಾಡಿದ್ದೇನೆ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಜಿತ್ ಕುಮಾರ್ ಹೇಳುವಂತೆ, “ಪೋಸ್ಟ್ ಪೊಲೀಸ್ ಇಲಾಖೆಯ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಡಿವೈಎಸ್ಪಿ ನೀಡುವ ವಿವರಣೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಇದೀಗ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಕಾರ್ಯಕರ್ತರು ಡಿವೈಎಸ್ಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಅಲತ್ತೂರಿನ ಡಿವೈಎಸ್ಪಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಕೂಡ ನಡೆಯಲಿದೆ ಎಂದು ತಿಳಿದು ಬಂದಿದೆ.