ಮಲಯಾಳಂ ನಟರಾದ ಮಮ್ಮುಟ್ಟಿ, ದುಲ್ಕರ್, ಪೃಥ್ವಿರಾಜ್ ನಿವಾಸದ ಮೇಲೆ ಈಡಿ ದಾಳಿ
Update: 2025-10-08 12:34 IST
ನಟ ಮಮ್ಮುಟ್ಟಿ, ಪುತ್ರ ದುಲ್ಕರ್ ಸಲ್ಮಾನ್ (Photo: instagram/dqsalmaan)
ಹೊಸದಿಲ್ಲಿ : ವಾಹನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಚಲನಚಿತ್ರ ನಟ ಮಮ್ಮುಟ್ಟಿ, ಅವರ ಪುತ್ರ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ಇಎಂಎ) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ತಮಿಳುನಾಡಿನಲ್ಲಿ ನಟರಿಗೆ ಸೇರಿದ ಮನೆಗಳು ಹಾಗೂ ಇತರೆ 17 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರ ಪುತ್ರ ದುಲ್ಕರ್ ತಮ್ಮ ಲ್ಯಾಂಡ್ ರೋವರ್ ಡಿಫೆಂಡರ್ ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳ ಕ್ರಮವನ್ನು ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಈಡಿ ಅಧಿಕಾರಿಗಳು ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.