×
Ad

ಅಕ್ರಮ ಮರಳು ಗಣಿಗಾರಿಕೆ| ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಈಡಿ ದಾಳಿ

Update: 2026-01-16 22:20 IST

ಸಾಂದರ್ಭಿಕ ಚಿತ್ರ | Photo Credit ; PTI


ಹೊಸದಿಲ್ಲಿ,ಜ.16: ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶುಕ್ರವಾರ ಮಧ್ಯಪ್ರದೇಶದ ಭೋಪಾಲ್‌, ಹೋಶಂಗಾಬಾದ್ ಮತ್ತು ಬೇತುಲ್ ಹಾಗೂ ಮಹಾರಾಷ್ಟ್ರದ ನಾಗ್ಪುರ ಮತ್ತು ಭಂಡಾರಾ ಜಿಲ್ಲೆಗಳಲ್ಲಿಯ 16 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ದಾಳಿಗಳನ್ನು ನಡೆಸಲಾಗಿದೆ. ನಾಗ್ಪುರದ ಸದರ್ ಮತ್ತು ಅಂಬಾಝರಿ ಪೋಲಿಸ್ ಠಾಣೆಗಳಲ್ಲಿ ನರೇಂದ್ರ ಪಿಂಪ್ಲೆ, ಅಮೋಲ್ ಅಲಿಯಾಸ್ ಗುಡ್ಡು ಖೋರ್ಗಡೆ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಆಧಾರದಲ್ಲಿ ಈಡಿ ತನಿಖೆಯನ್ನು ಕೈಗೊಂಡಿದೆ.

ಈಡಿ ಪ್ರಕಾರ ಆರೋಪಿಗಳು ಅಕ್ರಮ ಮರಳು ದಂಧೆಗೆ ನಕಲಿ ವಿದ್ಯುನ್ಮಾನ ಸಾಗಾಟ ಪರವಾನಿಗೆಗಳನ್ನು (ಇಟಿಪಿಗಳು) ಬಳಸುತ್ತಿದ್ದರು. ನಾಗಪುರ ಸುತ್ತುಮುತ್ತಲಿನ ಮರಳು ಪ್ರದೇಶಗಳನ್ನು ಮುಚ್ಚಲಾಗಿದ್ದರೂ ಮರಳು ಮಾಫಿಯಾವು ಸಾಗಾಣಿಕೆದಾರರು ಮತ್ತು ಇತರೊಂದಿಗೆ ಶಾಮೀಲಾಗಿ ಅಕ್ರಮ ಗಣಿಗಾರಿಕೆಯನ್ನು ಮುಂದುವರಿಸಿತ್ತು ಎನ್ನುವುದನ್ನು ಈಡಿ ತನಿಖೆಯು ಬಯಲಿಗೆಳೆದಿದೆ.

ದಂಧೆಕೋರರು ಮಧ್ಯಪ್ರದೇಶದಿಂದ ನಕಲಿ ರಾಯಲ್ಟಿ ಪಾವತಿ ದಾಖಲೆಗಳನ್ನು ಪಡೆದುಕೊಂಡು ಅಕ್ರಮ ಮರಳನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಲು ಅವುಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ.

ತನಿಖೆಯು ಮಧ್ಯಪ್ರದೇಶದಲ್ಲಿ ಕಾನೂನುಬದ್ಧವಾಗಿ ಗುತ್ತಿಗೆಗೆ ಪಡೆದುಕೊಂಡಿರುವ ಮರಳು ದಿಬ್ಬಗಳ ಹೆಸರಿನಲ್ಲಿ ನಕಲಿ ಇಟಿಪಿಗಳನ್ನು ತಯಾರಿಸುತ್ತಿದ್ದ ರಾಹುಲ್ ಖನ್ನಾ ಮತ್ತು ಬಾಬು ಅಗರವಾಲ್ ನೇತೃತ್ವದ ಮಾಫಿಯಾವನ್ನು ಭೇದಿಸಿದೆ ಎಂದು ಈಡಿ ತಿಳಿಸಿದೆ.

ಈ ನಕಲಿ ಇಟಿಪಿಗಳನ್ನು ನಾಗಪುರದಲ್ಲಿಯ ಮರಳು ಮಾಫಿಯಾ ದಂಧೆಕೋರರಿಗೆ ಪ್ರತಿ ಪರವಾನಿಗೆಗೆ 6,000 ರೂ.ಗಳಿಂದ 10,000 ರೂ.ವರೆಗಿನ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖಾ ಸಂಸ್ಥೆಯು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News