×
Ad

ಸಂಭಲ್‌ನಲ್ಲಿ ಮಸೀದಿಗಳ ಒಳಗೆ ಮಾತ್ರ ಈದ್ ನಮಾಝ್‌ಗೆ ಅವಕಾಶ: ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ!

Update: 2025-03-27 16:47 IST

ಸಾಂದರ್ಭಿಕ ಚಿತ್ರ | PC : PTI 

ಲಕ್ನೋ : ಈದ್-ಉಲ್-ಫಿತರ್ ಮತ್ತು ರಮಝಾನ್‌ನ ಕೊನೆಯ ಶುಕ್ರವಾರದ ಪ್ರಾರ್ಥನೆಗಳನ್ನು ನಡೆಸಲು ಮಸೀದಿಗಳು ಅಥವಾ ಈದ್ಗಾಗಳ ಒಳಗೆ ಮಾತ್ರ ಅನುಮತಿಸಲಾಗುವುದು ಎಂದು ಸಂಭಲ್ ಪೊಲೀಸರು ಹೇಳಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬೀದಿಗಳು ಅಥವಾ ಮೇಲ್ಛಾವಣಿಗಳ ಮೇಲೆ ನಮಾಝ್‌ಗೆ ಅವಕಾಶವಿಲ್ಲ. ರಮಝಾನ್‌ನ ಕೊನೆಯ ಶುಕ್ರವಾರ ಮತ್ತು ಈದ್-ಉಲ್-ಫಿತರ್ ದಿನ ಧ್ವನಿವರ್ಧಕಗಳ ಬಳಕೆಗೆ ಕೂಡ ಅನುಮತಿಯನ್ನೂ ನೀಡಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಸಂಭಲ್‌ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ವಿರೋಧಿಸಿ ನವೆಂಬರ್ 24ರಂದು ಸಂಭಲ್‌ನಲ್ಲಿ ಹಿಂಸಾಚಾರ ನಡೆದಿತ್ತು. ಈ ವೇಳೆ ಐವರು ಮೃತಪಟ್ಟಿದ್ದರು.

ಸರಕಾರ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶ ನೀಡುವಂತೆ ಕೆಲ ಗುಂಪು ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತ್ತು. ಹಬ್ಬದ ಹಿನ್ನೆಲೆ ಬುಧವಾರ ಜಿಲ್ಲೆಯ ಸರ್ದಾರ್ ಕೊತ್ವಾಲಿಯಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ಧರ್ಮಗಳು ಮತ್ತು ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಸೀದಿಗಳು ಮತ್ತು ಈದ್ಗಾಗಳ ಒಳಗೆ ಮಾತ್ರ ಪ್ರಾರ್ಥನೆಗಳನ್ನು ನಡೆಸಲು ಅನುಮತಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಹೇಳಿದ್ದಾರೆ. ಈ ವೇಳೆ ಉಪವಿಭಾಗಾಧಿಕಾರಿ ವಂದನಾ ಮಿಶ್ರಾ ಮತ್ತು ವೃತ್ತಾಧಿಕಾರಿ ಅನುಜ್ ಚೌಧರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News