×
Ad

'ಘೋಷಣಾ ಪತ್ರಕ್ಕೆ ಸಹಿ ಹಾಕಿ ಅಥವಾ ಅಸಂಬದ್ಧ ಆರೋಪಗಳಿಗೆ ಕ್ಷಮೆಯಾಚಿಸಿ': ರಾಹುಲ್ ಗಾಂಧಿಯವರ ಮತ ಕಳ್ಳತನ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು

Update: 2025-08-08 15:12 IST

ರಾಹುಲ್‌ ಗಾಂಧಿ (Photo: PTI)

ಹೊಸದಿಲ್ಲಿ: ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳು ನೀಡಿರುವ ಘೋಷಣಾ ಪತ್ರಕ್ಕೆ ಸಹಿ ಹಾಕುವಂತೆ ಅಥವಾ ತಮ್ಮ ಅಸಂಬದ್ಧ ಆರೋಪಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಭಾರತೀಯ ಚುನಾವಣಾ ಆಯೋಗ (ECI) ಶುಕ್ರವಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

"ರಾಹುಲ್ ಗಾಂಧಿಯವರಿಗೆ ತಮ್ಮ ವಿಶ್ಲೇಷಣೆ ಸರಿ ಎಂದೆನಿಸಿದರೆ ಮತ್ತು ಚುನಾವಣಾ ಆಯೋಗದ ವಿರುದ್ಧದ ಆರೋಪಗಳು ಸತ್ಯವೆಂದು ಭಾವಿಸಿದರೆ, ಅವರು ಸಲೀಸಾಗಿ ಅಫಿಡವಿಟ್‌ಗೆ ಸಹಿ ಹಾಕಬಹುದು" ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.

ಒಂದು ವೇಳೆ ಅವರು ಅಫಿಡವಿಟ್‌ಗೆ ಸಹಿ ಹಾಕದಿದ್ದರೆ, ತಮ್ಮ ಆರೋಪಗಳ ಮೇಲೆ ರಾಹುಲ್ ಗಾಂಧಿಗೆ ನಂಬಿಕೆ ಇಲ್ಲವೆಂದು ಅರ್ಥ. ಅಂತಹ ಸಂದರ್ಭದಲ್ಲಿ ಅವರು ರಾಷ್ಟ್ರದ ಕ್ಷಮೆಯಾಚಿಸಬೇಕಾಗುತ್ತದೆ ಎಂದು ಆಯೋಗವು ಸ್ಪಷ್ಟಪಡಿಸಿದೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ 1,00,250 ನಕಲಿ ಮತಗಳು ಸೇರಿಸಲಾಗಿದೆ ಎಂದು ಆರೋಪಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪತ್ರದಲ್ಲಿ, ರಾಹುಲ್ ಗಾಂಧಿ ಅವರು ಸಾರ್ವಜನಿಕವಾಗಿ ಉಲ್ಲೇಖಿಸಿದ "ಅನರ್ಹ ಮತದಾರರ ಸೇರ್ಪಡೆ" ಮತ್ತು "ಅರ್ಹ ಮತದಾರರ ಹೊರಗಿಡುವಿಕೆ" ಕುರಿತಂತೆ 1960ರ ಮತದಾರರ ನೋಂದಣಿ ನಿಯಮಗಳ ಪ್ರಕಾರ ಲಗತ್ತಿಸಲಾದ ಘೋಷಣೆ/ಪ್ರಮಾಣಪತ್ರಕ್ಕೆ ಸಹಿ ಹಾಕಿ ಹಿಂದಿರುಗಿಸುವಂತೆ ವಿನಂತಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ವಂಚನೆ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಆರೋಪಗಳಿಗೂ ಅಲ್ಲಿನ ಸಿಇಒ ಪ್ರತಿಕ್ರಿಯಿಸಿ, ಅಫಿಡವಿಟ್ ಸಲ್ಲಿಸಿ ನಿರ್ದಿಷ್ಟ ಪುರಾವೆಗಳನ್ನು ಒದಗಿಸಲು ಸೂಚಿಸಿದ್ದಾರೆ.

ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸಲಾಗಿದೆ ಎಂದು ಒತ್ತಿ ಹೇಳಿದ್ದಾರೆ. ಕರಡು ಮತ್ತು ಅಂತಿಮ ಪಟ್ಟಿಗಳನ್ನು ಆಗಸ್ಟ್ ಹಾಗೂ ಸೆಪ್ಟೆಂಬರ್ 2024ರಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಹಂಚಿಕೊಂಡಿದ್ದು, ಆ ಸಮಯದಲ್ಲಿ ಯಾವುದೇ ಮೇಲ್ಮನವಿ ಸಲ್ಲಿಸದಿದ್ದುದನ್ನು ಅವರು ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News