×
Ad

ಕರ್ತವ್ಯದ ಅವಧಿಯ ನಂತರ ವಿಮಾನ ಚಲಾಯಿಸಲು ಪೈಲಟ್ ನಿರಾಕರಣೆ: ವಿಮಾನ ನಿಲ್ದಾಣದಲ್ಲಿ ಒಂದು ಗಂಟೆ ಕಾಲ ಕಾದ ಏಕನಾಥ್ ಶಿಂದೆ

Update: 2025-06-07 14:18 IST

 ಏಕನಾಥ್ ಶಿಂದೆ | PC : PTI 

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಯ ಖಾಸಗಿ ವಿಮಾನದ ಪೈಲಟ್ ತನ್ನ ಕರ್ತವ್ಯದ ಅವಧಿ ಮುಕ್ತಾಯಗೊಂಡಿರುವುದರಿಂದ ವಿಮಾನ ಚಲಾಯಿಸಲು ನಿರಾಕರಿಸಿದ ಘಟನೆ ಶುಕ್ರವಾರ ನಡೆದಿದೆ. ಇದರಿಂದಾಗಿ, ಜಲಗಾಂವ್‌ ನಿಂದ ಮುಂಬೈಗೆ ತೆರಳಬೇಕಿದ್ದ ಅವರ ಪ್ರಯಾಣ ಸುಮಾರು ಒಂದು ಗಂಟೆ ತಡವಾಯಿತು ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಮುಕ್ತಾಯಿನಗರದಲ್ಲಿ ಆಯೋಜನೆಗೊಂಡಿದ್ದ ಸಂತ ಮುಕ್ತಾಯಿಯ ಪಲ್ಲಕ್ಕಿ ಯಾತ್ರೆಯಲ್ಲಿ ಪಾಲ್ಗೊಂಡ ನಂತರ, ಜಲಗಾಂವ್‌ ನಿಂದ ಮುಂಬೈಗೆ ತೆರಳಲು ಏಕನಾಥ್ ಶಿಂದೆ ಸಿದ್ಧವಾದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಶಿವಸೇನೆ (ಶಿಂದೆ ಬಣ) ಮುಖ್ಯಸ್ಥ ಹಾಗೂ ಉಪ ಮುಖ್ಯಮಂತ್ರಿಯೂ ಆದ ಏಕನಾಥ್ ಶಿಂದೆ, ಮಧ್ಯಾಹ್ನ 3.45ರ ವೇಳೆಗೆ ಜಲಗಾಂವ್‌ ಗೆ ಆಗಮಿಸಬೇಕಿತ್ತು. ಆದರೆ, ತಾಂತ್ರಿಕ ತೊಂದರೆಗಳಿಂದಾಗಿ ಅವರು ಜಲಗಾಂವ್‌ ಗೆ ಆಗಮಿಸುವುದು ಸುಮಾರು ಎರಡೂವರೆ ಗಂಟೆಗಳಷ್ಟು ವಿಳಂಬವಾಯಿತು. ಜಲಗಾಂವ್‌ ಗೆ ಆಗಮಿಸಿದ ನಂತರ, ಅವರು ಮುಕ್ತಾಯಿನಗರದತ್ತ ತೆರಳಿದ್ದರು. ಅವರೊಂದಿಗೆ ಸಚಿವರಾದ ಗಿರೀಶ್ ಮಹಾಜನ್, ಗುಲಾಬ್ ರಾವ್ ಪಾಟೀಲ್ ಹಾಗೂ ಕೆಲವು ಆಡಳಿತಾತ್ಮಕ ಅಧಿಕಾರಿಗಳೂ ಇದ್ದರು.

ಪಲ್ಲಕ್ಕಿ ಯಾತ್ರೆಯಲ್ಲಿ ಪಾಲ್ಗೊಂಡು, ಸಂತ ಮುಕ್ತಾಯಿ ದೇವಾಲಯಕ್ಕೆ ಭೇಟಿ ನೀಡಿದ ನಂತರ, ಶಿಂದೆ ಹಾಗೂ ಅವರ ತಂಡ ರಾತ್ರಿ 9.15ರ ವೇಳೆಗೆ ಜಲಗಾಂವ್ ವಿಮಾನ ನಿಲ್ದಾಣಕ್ಕೆ ಮರಳಿತ್ತು. ಆದರೆ, ತನ್ನ ಕರ್ತವ್ಯದ ಅವಧಿ ಮುಕ್ತಾಯಗೊಂಡಿದೆ ಎಂಬ ಕಾರಣವನ್ನು ಮುಂದೊಡ್ಡಿ, ಅವರ ವಿಮಾನದ ಪೈಲಟ್ ವಿಮಾನ ಚಲಾಯಿಸಲು ನಿರಾಕರಿಸಿದ್ದಾರೆ. ಮತ್ತೆ ಹಾರಾಟದ ಅನುಮತಿ ಪಡೆಯಲು ಕೆಲ ಸಮಯ ಹಿಡಿಯಲಿದೆ ಎಂದೂ ಅವರು ಕಾರಣ ನೀಡಿದ್ದಾರೆ. ಅಲ್ಲದೆ, ತಾನು ವಿಮಾನ ಚಾಲನೆಗೆ ನಿರಾಕರಿಸಲು ತನ್ನ ಹದಗೆಟ್ಟಿದ್ದ ಆರೋಗ್ಯ ಕೂಡಾ ಕಾರಣ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News