ರಾವಣನ ಪತನಕ್ಕೆ ದುರಹಂಕಾರವೇ ಕಾರಣವಾಗಿತ್ತು: ಬಿಜೆಪಿ ವಿರುದ್ಧ ಏಕನಾಥ ಶಿಂದೆ ಪರೋಕ್ಷ ದಾಳಿ
ಏಕನಾಥ್ ಶಿಂಧೆ | PC : PTI
ಮುಂಬೈ,ನ.23: ಶಿವಸೇನೆಯ ಶಾಸಕರನ್ನು ಬೇಟೆಯಾಡಲು ಪ್ರಯತ್ನಕ್ಕಾಗಿ ಮಿತ್ರಪಕ್ಷ ಬಿಜೆಪಿಯನ್ನು ಟೀಕಿಸಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆಯವರು, ತನ್ನ ಪಕ್ಷದ ಬೆನ್ನು ಬೀಳುತ್ತಿರುವವರಿಗೆ ರಾವಣನ ಗತಿಯೇ ಎದುರಾಗಲಿದೆ ಎಂದು ಹೇಳಿದ್ದಾರೆ.
ಶಿಂದೆ ಅವರು ನಗರ ಪಂಚಾಯತ್ ಅಧ್ಯಕ್ಷ ಹುದ್ದೆಗೆ ತನ್ನ ಪಕ್ಷದ ಅಭ್ಯರ್ಥಿಯಾಗಿರುವ ಭರತ ರಾಜಪೂತ್ ಪರ ಪ್ರಚಾರಕ್ಕಾಗಿ ದಹನುಗೆ ಭೇಟಿ ನೀಡಿದ್ದ ಸಂದರ್ಭ ‘ರಾವಣನ ದುರಹಂಕಾರ’ದ ವಿರುದ್ಧ ಮತ ಚಲಾಯಿಸುವಂತೆ ಜನತೆಗೆ ಕರೆ ನೀಡಿದ ಶಿಂದೆ,‘ನಾವು ಸರ್ವಾಧಿಕಾರ ಮತ್ತು ನಿರಂಕುಶತೆಯ ವಿರುದ್ಧ ಒಂದಾಗಿ ಇಲ್ಲಿಗೆ ಬಂದಿದ್ದೇವೆ’ ಎಂದರು.
ರಾಜಪೂತ್ ಪಾಲ್ಘರ್ ಜಿಲ್ಲಾ ಬಿಜೆಪಿಯ ಅಧ್ಯಕ್ಷರೂ ಆಗಿದ್ದಾರೆ. ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಕಣದಿಂದ ಹಿಂದೆಗೆದುಕೊಂಡಿದ್ದು,ಶಿವಸೇನೆ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯೇರ್ಪಟ್ಟಿದೆ.
‘ನಮ್ಮ ಸೋದರಿಯರು ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು ಮತ್ತು ಅದರ ಫಲಿತಾಂಶವನ್ನು ನಾವು ನೋಡಿದ್ದೇವೆ. ನಮ್ಮ ಸೋದರಿಯರು ಅದೇ ರೀತಿ ಮತ ಚಲಾಯಿಸಿದರೆ ಈ ಚುನಾವಣೆಗಳಲ್ಲಿ ನಾವು ಭಾರೀ ಗೆಲುವನ್ನು ಸಾಧಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಈ ಗೆಲುವು ಈ ಪ್ರದೇಶದಲ್ಲಿ ಪ್ರಮುಖ ಅಭಿವೃಧ್ಧಿಗೆ ಕಾರಣವಾಗಲಿದೆ ’ಎಂದು ಹೇಳಿದ ಶಿಂದೆ,‘ಭ್ರಷ್ಟಾಚಾರವನ್ನು ಬೇರು ಸಹಿತ ನಿರ್ಮೂಲನಗೊಳಿಸಲು ನಾವು ಬಯಸಿದ್ದೇವೆ,ಆದ್ದರಿಂದ ಈ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವುದು ತುಂಬ ಮುಖ್ಯವಾಗಿದೆ’ ಎಂದರು.
ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿನ ಆಂತರಿಕ ತಿಕ್ಕಾಟವನ್ನು ಕೇಸರಿ ಪಕ್ಷದ ಉನ್ನತ ನಾಯಕತ್ವದ ಗಮನಕ್ಕೆ ತರುವ ಶಿಂದೆ ಪ್ರಯತ್ನಗಳು ನಿರೀಕ್ಷಿತ ಫಲವನ್ನು ನೀಡಿಲ್ಲ. ತಾನು ತನ್ನ ವಿಸ್ತರಣಾ ಯೋಜನೆಯನ್ನು ಮುಂದುವರಿಸುವುದಾಗಿ ಬಿಜೆಪಿ ಅವರಿಗೆ ತಿಳಿಸಿದೆ ಎನ್ನಲಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮುನ್ನ ಶಿವಸೇನೆ ನಾಯಕರನ್ನು ಬೇಟೆಯಾಡಲು ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್ ಅವರ ಪ್ರಯತ್ನಗಳು ಮತ್ತು ಮಹಾಯುತಿ ಸರಕಾರದಲ್ಲಿನ ಮಲತಾಯಿ ಧೋರಣೆಯ ಬಗ್ಗೆ ಶಿಂದೆ ಕಳವಳ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.