ಚುನಾವಣಾ ಬಾಂಡ್ ರದ್ದತಿ ಬೆನ್ನಲ್ಲೇ ಬಿಜೆಪಿ ಬೊಕ್ಕಸ ಭರ್ತಿ ಮಾಡಿದ ಎಲೆಕ್ಟೊರಲ್ ಟ್ರಸ್ಟ್ ಗಳು!
Photo credit: PTI
ಹೊಸದಿಲ್ಲಿ: ಚುನಾವಣಾ ಬಾಂಡ್ ವ್ಯವಸ್ಥೆಯನ್ನು 2024ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ರದ್ದುಮಾಡಿರುವುದರಿಂದ ಬಿಜೆಪಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವ ಬದಲು 2024-25ರಲ್ಲಿ ಪಕ್ಷದ ಬೊಕ್ಕಸಕ್ಕೆ ಎಲೆಕ್ಟೊರಲ್ ಟ್ರಸ್ಟ್ ಗಳಿಂದ ಭಾರಿ ಮೊತ್ತ ಹರಿಯಲು ಕಾರಣವಾಗಿದೆ. ಎಲೆಕ್ಟೊರಲ್ ಟ್ರಸ್ಟ್ ಗಳೇ ಪಕ್ಷಕ್ಕೆ 2,577 ಕೋಟಿ ರೂಪಾಯಿ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ.
ಭಾರತೀಯ ಜನತಾ ಪಕ್ಷ 2023-24ರಲ್ಲಿ ಐಚ್ಛಿಕ ದೇಣಿಗೆಗಳ ಮೂಲಕ 3,967 ಕೋಟಿ ರೂಪಾಯಿ ಗಳಿಸಿತ್ತು. ಈ ಪೈಕಿ 1,686 ಕೋಟಿ ರೂಪಾಯಿ ಬಾಂಡ್ಗಳ ಮೂಲಕ ಹಾಗೂ 856 ಕೋಟಿ ರೂಪಾಯಿ ಟ್ರಸ್ಟ್ ಗಳ ಮೂಲಕ ಬಂದಿತ್ತು. ಚುನಾವಣಾ ಬಾಂಡ್ಗಳನ್ನು ರದ್ದುಪಡಿಸಿದ ಬಳಿಕ, ಭಾಗಶಃ ಅನಾಮಧೇಯತೆಯನ್ನು ಬಯಸಿರುವ ಕಾರ್ಪೊರೇಟ್ ದೇಣಿಗೆದಾರರು ಎಲೆಕ್ಟೊರಲ್ ಟ್ರಸ್ಟ್ ಮಾರ್ಗವನ್ನು ಅನುಸರಿಸುತ್ತಿದ್ದು, ಬಿಜೆಪಿ ಅತಿದೊಡ್ಡ ಫಲಾನುಭವಿಯಾಗಿ ಮುಂದುವರಿದಿದೆ.
ಎಲೆಕ್ಟೊರಲ್ ಟ್ರಸ್ಟ್ ಗಳ ಮೂಲಕ ಒಟ್ಟು 4,276 ಕೋಟಿ ರೂಪಾಯಿ ದೇಣಿಗೆ ಹರಿದಿದ್ದು, ಈ ಪೈಕಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಶೇಕಡ 83.6ರಷ್ಟು ಮೊತ್ತವನ್ನು ಸ್ವೀಕರಿಸಿದೆ ಎನ್ನುವುದು ಚುನಾವಣಾ ಆಯೋಗದ ವೆಬ್ಸೈಟ್ನಿಂದ ತಿಳಿದು ಬರುತ್ತದೆ. 2023-24ಕ್ಕೆ ಹೋಲಿಸಿದರೆ ಬಿಜೆಪಿಗೆ ಹರಿದಿರುವ ಕಾರ್ಪೊರೇಟ್ ದೇಣಿಗೆ ನಾಲ್ಕು ಪಟ್ಟು ಹೆಚ್ಚಳ ಕಂಡಿದೆ. ಕಾಂಗ್ರೆಸ್ ಪಕ್ಷ ಒಟ್ಟು ದೇಣಿಗೆಯ ಶೇಕಡ 7.3 ಮತ್ತು ತೃಣಮೂಲ ಕಾಂಗ್ರೆಸ್ ಶೇಕಡ 3.6ರಷ್ಟು ದೇಣಿಗೆ ಪಡೆದಿವೆ.
ಎಲೆಕ್ಟೊರಲ್ ಟ್ರಸ್ಟ್ ಮೂಲಕ ಸ್ವೀಕರಿಸುವ ದೇಣಿಗೆಯು ಪಕ್ಷಗಳು ಸ್ವೀಕರಿಸುವ ಒಟ್ಟು ದೇಣಿಗೆಯ ಒಂದು ಭಾಗವಾಗಿದೆ. ವೈಯಕ್ತಿಕ ದೇಣಿಗೆಗಳು, ಕಾರ್ಪೊರೇಟ್ ದೇಣಿಗೆಗಳು, ಸಾಂಸ್ಥಿಕ ದೇಣಿಗೆಗಳು ಮತ್ತು ಕಲ್ಯಾಣ ಸಂಸ್ಥೆಗಳು ನೇರವಾಗಿ ದೇಣಿಗೆ ನೀಡುತ್ತವೆ. ಕಳೆದ ಹಲವು ವರ್ಷಗಳಿಂದ ಟ್ರಸ್ಟ್ ದೇಣಿಗೆಯಲ್ಲದೇ ಇತರ ಮೂಲಗಳು ದೇಣಿಗೆಗಳು ನಿರಂತರವಾಗಿ ಹೆಚ್ಚುತ್ತಿವೆ.