×
Ad

‘ಎಮರ್ಜೆನ್ಸಿ’ ಚಲನಚಿತ್ರದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ಸಿಬಿಎಫ್‌ಸಿ ಸೂಚನೆ

Update: 2024-09-08 20:09 IST

 PC : X

ಹೊಸದಿಲ್ಲಿ : ಮೂರು ಕಡೆ ಕತ್ತರಿ ಪ್ರಯೋಗ ಮಾಡಬೇಕು ಹಾಗೂ ಚಲನಚಿತ್ರದ ವಿವಾದಾತ್ಮಕ ಚಾರಿತ್ರಿಕ ಹೇಳಿಕೆಗಳಿಗೆ ವಾಸ್ತವಿಕ ಮೂಲಗಳನ್ನು ಒದಗಿಸಬೇಕು ಎಂಬ ಷರತ್ತಿನೊಂದಿಗೆ ಕೇಂದ್ರೀಯ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಕಂಗನಾ ರಣಾವಾತ್ ಅವರ ‘‘ಎಮರ್ಜೆನ್ಸಿ’’ ಚಲನಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ನೀಡಿದೆ.

ಪಾಕಿಸ್ತಾನದ ಯೋಧರು ಬಾಂಗ್ಲಾದೇಶಿ ನಿರಾಶ್ರಿತರ ಮೇಲೆ ದಾಳಿ ನಡೆಸುತ್ತಿರುವ, ಮುಖ್ಯವಾಗಿ ಯೋಧರು ಶಿಶುವೊಂದರ ತಲೆಯನ್ನು ಒಡೆದು ಹಾಕುತ್ತಿರುವ ಸನ್ನಿವೇಶ ಹಾಗೂ ಮೂವರು ಮಹಿಳೆಯ ತಲೆ ಕತ್ತರಿಸುತ್ತಿರುವ ಇನ್ನೊಂದು ಸನ್ನಿವೇಶದಲ್ಲಿನ ನಿರ್ದಿಷ್ಟ ದೃಶ್ಯಗಳನ್ನು ಅಳಿಸುವಂತೆ ಅಥವಾ ಬದಲಾಯಿಸುವಂತೆ ಸಿಬಿಎಫ್‌ಸಿ ನಿರ್ದೇಶಕರಿಗೆ ಸಲಹೆ ನೀಡಿದೆ.

ಇದಲ್ಲದೆ, ಚಿತ್ರದಲ್ಲಿ ನಾಯಕನ ಸಾವಿಗೆ ಪ್ರತಿಕ್ರಿಯೆಯಾಗಿ ಗುಂಪಿನಿಂದ ಯಾರೋ ಶಾಪ ಹಾಕುತ್ತಿರುವುದನ್ನು ಕೂಡ ಬದಲಾಯಿಸುವಂತೆ ಸಿಬಿಎಫ್‌ಸಿ ಸಲಹೆ ನೀಡಿದೆ. ಸಂಭಾಷಣೆಯ ಸಾಲೊಂದರಲ್ಲಿ ಉಲ್ಲೇಖಿಸಿದ ಕುಟುಂಬದ ಉಪ ನಾಮವನ್ನು ಕೂಡ ಬದಲಾಯಿಸುವಂತೆ ಕೂಡ ಸಿಬಿಎಫ್‌ಸಿ ಸೂಚಿಸಿದೆ.

ಭಾರತೀಯ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಉಲ್ಲೇಖಿಸಿದ ನಿಕ್ಸನ್ ಪಾತ್ರ ನಿರ್ವಹಿಸಿದ ನಟನ ಸಂಭಾಷಣೆಯ ಸಾಲೊಂದರ ಕುರಿತು ಸರಿಯಾದ ಮಾಹಿತಿ ಒದಗಿಸುವಂತೆ ಸಿಬಿಎಫ್‌ಸಿ ಚಿತ್ರ ನಿರ್ದೇಶಕರಿಗೆ ಸೂಚಿಸಿದೆ.

ಬಾಂಗ್ಲಾದೇಶಿ ನಿರಾಶ್ರಿತರ ಮಾಹಿತಿ, ನ್ಯಾಯಾಲಯದ ತೀರ್ಪುಗಳ ವಿವರ ಹಾಗೂ ಆಪರೇಷನ್ ಬ್ಲೂಸ್ಟಾರ್‌ನ ದೃಶ್ಯಗಳನ್ನು ಬಳಸಲು ಪಡೆದುಕೊಂಡ ಅನುಮತಿ ಸೇರಿದಂತೆ ಚಿತ್ರದಲ್ಲಿ ಪ್ರಸ್ತಾಪಿಸಲಾದ ಎಲ್ಲಾ ಸಂಶೋಧನಾ ಉಲ್ಲೇಖ ಹಾಗೂ ದತ್ತಾಂಶಗಳ ಮೂಲವನ್ನು ಕೂಡ ಒದಗಿಸುವಂತೆ ಸಿಬಿಎಫ್‌ಸಿ ಕೋರಿದೆ.

ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರ ನಿರ್ವಹಿಸಿದ ‘‘ಎಮರ್ಜೆನ್ಸಿ’’ ಚಿತ್ರ ಸೆಪ್ಟಂಬರ್ 6ರಂದು ಬಿಡುಗಡೆಗೆ ದಿನ ನಿಗದಿಯಾಗಿತ್ತು. ಆದರೆ, ಹಲವು ಅಡೆತಡೆಗಳ ಕಾರಣಕ್ಕೆ ಇದುವರೆಗೆ ಬಿಡುಗಡೆಯಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News