×
Ad

ಪಂಜಾಬಿನಲ್ಲಿ ಎನ್ನಾರೈ ಕೋಟಾ | ಶುದ್ಧ ವಂಚನೆಯ ಮತ್ತೊಂದು ರೂಪ ಎಂದ ಸುಪ್ರೀಂ ಕೋರ್ಟ್

Update: 2024-09-24 22:09 IST

ಸುಪ್ರೀಂ ಕೋರ್ಟ್ |  PC  : PTI 

ಹೊಸದಿಲ್ಲಿ : ಅನಿವಾಸಿ ಭಾರತೀಯರ ಸಂಬಂಧಿಗಳ ವಿಶೇಷ ಕೋಟಾದಡಿ ರಾಜ್ಯದಲ್ಲಿಯ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದ ಪಂಜಾಬ್ ಸರಕಾರದ ಅಧಿಸೂಚನೆಯನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

ಅನಿವಾಸಿ ಭಾರತೀಯರ ಸಂಬಂಧಿಕರು ಪಂಜಾಬಿನ ಮೆಡಿಕಲ್ ಕಾಲೇಜುಗಳಲ್ಲಿ ತಮಗಾಗಿ ಶೇ.15ರಷ್ಟು ಸ್ಥಾನಗಳನ್ನು ಮೀಸಲಿಟ್ಟಿರುವ ಕೋಟಾದಡಿ ಅರ್ಜಿಗಳನ್ನು ಸಲ್ಲಿಸಬಹುದು. ಆ.20ರಂದು ಪಂಜಾಬ್ ಸರಕಾರವು ಎನ್ನಾರೈಗಳ ವ್ಯಾಖ್ಯಾನವನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿತ್ತು. ಅವರ ಚಿಕ್ಕಪ್ಪ,ಚಿಕ್ಕಮ್ಮ,ಅಜ್ಜ-ಅಜ್ಜಿ ಮತ್ತು ಸೋದರ ಸಂಬಂಧಿಗಳಂತಹ ಬಂಧುಗಳನ್ನು ಎನ್ನಾರೈ ವ್ಯಾಖ್ಯಾನದಲ್ಲಿ ಸೇರಿಸಿತ್ತು.

ಸೆ.11ರಂದು ಅಧಿಸೂಚನೆಯನ್ನು ರದ್ದುಗೊಳಿಸಿದ್ದ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು, ವ್ಯಾಖ್ಯಾನವನ್ನು ವಿಸ್ತರಿಸಿರುವುದು ಸರ್ವಥಾ ಸಮರ್ಥನೀಯವಲ್ಲ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಮಂಗಳವಾರ ವಿಚಾರಣೆ ಸಂದರ್ಭ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು, ಪಂಜಾಬ್ ಸರಕಾರದ ಅಧಿಸೂಚನೆಯನ್ನು ‘ಶುದ್ಧ ವಂಚನೆ’ ಎಂದು ಬಣ್ಣಿಸಿತು.

‘ನಾವು ಈ ಎನ್ನಾರೈ ಕೋಟಾವನ್ನು ನಿಲ್ಲಿಸಬೇಕಿದೆ. ಇದು ಸಂಪೂರ್ಣ ವಂಚನೆ. ಇದನ್ನೇ ನಾವು ನಮ್ಮ ಶಿಕ್ಷಣ ವ್ಯವಸ್ಥೆಗೆ ಮಾಡುತ್ತಿದ್ದೇವೆ. ತಾವು ಏನನ್ನು ವ್ಯವಹರಿಸುತ್ತಿದ್ದೇವೆ ಎನ್ನುವುದು ನ್ಯಾಯಾಧೀಶರಿಗೆ ತಿಳಿದಿರುತ್ತದೆ. ಉಚ್ಚ ನ್ಯಾಯಾಲಯವು ಈ ಪ್ರಕರಣವನ್ನು ಎಳೆಎಳೆಯಾಗಿ ನಿರ್ವಹಿಸಿದೆ’ ಎಂದು ಪೀಠವು ಹೇಳಿತು.

ರಾಜ್ಯ ಸರಕಾರವು ಎನ್‌ಆರ್‌ಐ ವ್ಯಾಖ್ಯಾನವನ್ನು ವಿಸ್ತರಿಸಿದ್ದು ಹಣ ದೋಚುವ ತಂತ್ರವಾಗಿದೆ ಎಂದೂ ಪೀಠವು ಕುಟುಕಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News