ಪ್ರಮುಖ ಮಾಲಿನ್ಯ ನಿಗ್ರಹ ವ್ಯವಸ್ಥೆಗಳ ಸ್ಥಾಪನೆಯಿಂದ ಶೇ.78ರಷ್ಟು ಕಲ್ಲಿದ್ದಲು ಸ್ಥಾವರಗಳಿಗೆ ಕೇಂದ್ರದ ವಿನಾಯಿತಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪರಿಸರ ಸಚಿವಾಲಯವು ಭಾರತದಲ್ಲಿಯ ಬಹುಪಾಲು ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಲ್ಫರ್ ಡೈಯಾಕ್ಸೈಡ್ ಹೊರಸೂಸುವಿಕೆಯನ್ನು ಕಡಿತಗೊಳಿಸಲು ವಿನ್ಯಾಸಗೊಳಿಸಲಾಗಿರುವ ಫ್ಲ್ಯೂ ಗ್ಯಾಸ್ ಡಿಸಲ್ಫರೈಸೇಷನ್(ಎಫ್ಜಿಡಿ) ಸಿಸ್ಟಮ್ ಗಳನ್ನು ಸ್ಥಾಪಿಸುವುದರಿಂದ ವಿನಾಯಿತಿಯನ್ನು ನೀಡಿದೆ. ಉಷ್ಣ ವಿದ್ಯುತ್ ಸ್ಥಾವರಗಳ ಶೇಷವಾದ ಫ್ಲ್ಯೂ ಗ್ಯಾಸ್ ವಾತಾವರಣದಲ್ಲಿ ಬೆರೆಯುತ್ತದೆ ಮತ್ತು ದ್ವಿತೀಯಕ ಪಾರ್ಟಿಕ್ಯುಲೇಟ್ ಮ್ಯಾಟರ್(ಪಿಎಂ)ನ್ನು ಸೃಷ್ಟಿಸುತ್ತದೆ. ಈ ಕಣಗಳು ವಾಯು ಮಾಲಿನ್ಯದೊಂದಿಗೆ ತಳುಕು ಹಾಕಿಕೊಂಡಿವೆ ಎಂದು thehindu.com ವರದಿ ಮಾಡಿದೆ.
ಭಾರತದಲ್ಲಿ ಸುಮಾರು 180 ಉಷ್ಣ ವಿದ್ಯುತ್ ಸ್ಥಾವರಗಳಿವೆ. ಒಂದೇ ಸ್ಥಾವರವು ಹಲವಾರು ಘಟಕಗಳನ್ನು ಹೊಂದಿರಬಹುದು. ಈಗ ದೇಶದಲ್ಲಿಯ 600 ಉಷ್ಣ ವಿದ್ಯುತ್ ಸ್ಥಾವರ(ಟಿಪಿಪಿ) ಘಟಕಗಳ ಪೈಕಿ ಕೇವಲ ಶೇ.11ರಷ್ಟು ಘಟಕಗಳಿಗೆ ಎಫ್ಜಿಡಿ ಸಿಸ್ಟಮ್ಗಳ ಸ್ಥಾಪನೆ ಕಡ್ಡಾಯವಾಗಿದೆ. ‘ಎ’ವರ್ಗದಲ್ಲಿರುವ ಈ ಸ್ಥಾವರಗಳು ರಾಷ್ಟ್ರ ರಾಜಧಾನಿ ಪ್ರದೇಶ(ಎನ್ಸಿಆರ್) ಅಥವಾ ಕನಿಷ್ಠ 10 ಲ.ಜನಸಂಖ್ಯೆ(2011ರ ಜನಗಣತಿಯಂತೆ) ಹೊಂದಿರುವ ನಗರಗಳಿಂದ 10 ಕಿ.ಮೀ.ವ್ಯಾಪ್ತಿಯೊಳಗಿವೆ. ಮೂಲತಃ ಈ ಸ್ಥಾವರಗಳು 2017ರೊಳಗೆ ಎಫ್ಜಿಡಿ ಸಿಸ್ಟಮ್ಗಳನ್ನು ಅಳವಡಿಸಿಕೊಳ್ಳಬೇಕಿತ್ತು,ಆದರೆ ಕಡ್ಡಾಯ ನಿಯಮವನ್ನು ಪಾಲಿಸಲು ಹಲವಾರು ಸಲ ವಿಸ್ತರಣೆಯನ್ನು ಪಡೆದುಕೊಂಡಿವೆ. ಈ ವಾರ ಹೊರಡಿಸಲಾದ ಗೆಝೆಟ್ ಅಧಿಸೂಚನೆಯ ಪ್ರಕಾರ ಈ ಸ್ಥಾವರಗಳಿಗೆ ಡಿ.30,2027ರ ಗಡುವನ್ನು ನೀಡಲಾಗಿದೆ.
ತೀವ್ರ ಮಾಲಿನ್ಯ ಪ್ರದೇಶಗಳು(ಸಿಪಿಎ) ಅಥವಾ ಕನಿಷ್ಠ ಐದು ವರ್ಷಗಳಿಗೆ ರಾಷ್ಟ್ರೀಯ ವಾಯು ಗುಣಮಟ್ಟ ಮಾನದಂಡಗಳನ್ನು ಪೂರೈಸಿರದ ನಗರಗಳ(ಎನ್ಎಸಿ) 10 ಕಿ.ಮೀ.ವ್ಯಾಪ್ತಿಯೊಳಗಿನ,‘ಬಿ’ ವರ್ಗಕ್ಕೆ ಸೇರಿದ ಇನ್ನೊಂದು ಶೇ.11ರಷ್ಟು ಟಿಟಿಪಿಗಳು ಎಫ್ಜಿಡಿಯನ್ನು ಸ್ಥಾಪಿಸಬೇಕಾಗಬಹುದು ಅಥವಾ ಸ್ಥಾಪಿಸದಿರಬಹುದು. ಇದು ತಜ್ಞರ ಸಮಿತಿ(ಇಎಸಿ)ಯ ನಿರ್ಧಾರವನ್ನು ಅವಲಂಬಿಸಿದೆ. ಪರಿಸರ ಸಚಿವಾಲಯವು ರಚಿಸಿರುವ ಈ ಸಮಿತಿಯು ಪ್ರಸ್ತಾವಿತ ಕಲ್ಲಿದ್ದಲು ಸ್ಥಾವರ ಯೋಜನೆಗಳಿಗೆ ಪರಿಸರ ಅನುಮತಿಗಳನ್ನು ನೀಡುತ್ತದೆ. ಇಎಸಿ ಮಾನದಂಡಗಳನ್ನು ಅನುಸರಿಸುವ ಬಿ ವರ್ಗದ ಸ್ಥಾವರಗಳು ಎಫ್ಜಿಡಿಯನ್ನು ಸ್ಥಾಪಿಸಲು ಡಿ.30,2028ರ ಗಡುವನ್ನು ಹೊಂದಿವೆ.
ಉಳಿದ ಶೇ.78ರಷ್ಟು ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಥವಾ ‘ಸಿ’ವರ್ಗಕ್ಕೆ ಸದ್ಯಕ್ಕೆ ಎಫ್ಜಿಸಿ ಸ್ಥಾಪನೆಯಿಂದ ವಿನಾಯಿತಿ ನೀಡಲಾಗಿದೆ.
ಎಫ್ಜಿಡಿ ಸ್ಥಾಪನೆಗೆ ಸಂಬಂಧಿಸಿದ ನಿಯಮಗಳ ಪರಿಷ್ಕರಣೆಯು ಈ ವರ್ಷದ ಎಪ್ರಿಲ್ನಲ್ಲಿ ಪ್ರಧಾನ ವಿಜ್ಞಾನ ಸಲಹೆಗಾರ ಅಜಯ ಸೂದ್ ಅವರ ನೇತೃತ್ವದಲ್ಲಿ ರಚಿಸಲಾದ ತಜ್ಞರ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿದೆ.
ಪರಿಸರ ಸಚಿವಾಲಯದ ನಿರ್ಧಾರವನ್ನು ಟೀಕಿಸಿರುವ ಸೆಂಟರ್ ಫಾರ್ ರೀಸರ್ಚ್ ಆ್ಯಂಡ್ ಎನರ್ಜಿ ಆನ್ ಕ್ಲೀನ್ ಏರ್ನಲ್ಲಿ ಎಫ್ಜಿಡಿಯ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಿರುವ ಮನೋಜ ಕುಮಾರ್ ಅವರು,ವಿದ್ಯುತ್ ಸ್ಥಾವರಗಳು 200 ಕಿ.ಮೀ.ದೂರದ ಪ್ರದೇಶಗಳಲ್ಲಿಯೂ ಪರಿಣಾಮವನ್ನು ಬೀರುತ್ತವೆ ಎನ್ನುವುದು ತಿಳಿದಿರುವ ಸಂಗತಿಯಾಗಿದೆ. ಹೀಗಾಗಿ ಅವು ಯಾವುದೇ ವರ್ಗಕ್ಕೆ ಸೇರಿದ್ದರೂ ಮಾಲಿನ್ಯದ ಮೂಲವಾಗಿವೆ. ಜೊತೆಗೆ ಎತ್ತರದ ಚಿಮಣಿಗಳನ್ನು ಬಳಸುವುದು ಪರಿಣಾಮಕಾರಿ ಮಾಲಿನ್ಯ ನಿಯಂತ್ರಣ ಕ್ರಮವಲ್ಲ,ಅದು ವಾತಾವರಣದಲ್ಲಿ ಎತ್ತರದಲ್ಲಿ ಸಲ್ಫರ್ ಡೈಯಾಕ್ಸೈಡ್ನ್ನು ಹರಡುತ್ತದೆ ಅಷ್ಟೇ. ಅಲ್ಲಿ ಅದು ಅಂತಿಮವಾಗಿ ವಿಷಕಾರಿ ಸೂಕ್ಷ್ಮ ಕಣಗಳನ್ನು ಸೃಷ್ಟಿಸುತ್ತದೆ. ಈ ನಿರ್ಧಾರವು ಶ್ವಾಸಕೋಶ ಮತ್ತು ಹೃದಯ ರೋಗಗಳ ಅಪಾಯವನ್ನು ಹೆಚ್ಚಿಸುವ ಮೂಲಕ ದೇಶದಲ್ಲಿಯ ಕೋಟ್ಯಂತರ ಜೀವಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದಾರೆ.