×
Ad

ಇವಿಎಂಗಳಲ್ಲಿ ಅಭ್ಯರ್ಥಿಗಳ ವರ್ಣಚಿತ್ರಗಳು : ಬಿಹಾರ ಚುನಾವಣೆಯಿಂದ ಜಾರಿ

Update: 2025-09-17 21:40 IST

 ಸಾಂದರ್ಭಿಕ ಚಿತ್ರ | PTI

ಹೊಸದಿಲ್ಲಿ,ಸೆ.17: ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳಲ್ಲಿ ಮತಪತ್ರಗಳ ವಿನ್ಯಾಸ ಬದಲಾಗಲಿದ್ದು, ಅಭ್ಯರ್ಥಿಗಳ ವರ್ಣಚಿತ್ರಗಳೊಂದಿಗೆ ಅವರ ಕ್ರಮ ಸಂಖ್ಯೆಗಳನ್ನು ಪ್ರಮುಖವಾಗಿ ಪ್ರದರ್ಶಿಸಲಿವೆ. ಚುನಾವಣಾ ಆಯೋಗವು ತನ್ನ ಮಾರ್ಗಸೂಚಿಯನ್ನು ಪರಿಷ್ಕರಿಸಿದ್ದು, ನೂತನ ನಿಯಮಗಳು ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಜಾರಿಗೊಳ್ಳಲಿವೆ.

1961ರ ಚುನಾವಣಾ ನಿಯಮಾವಳಿಯ ನಿಯಮ 49ಬಿ ಅಡಿ ಸ್ಪಷ್ಟ ಗುರುತಿಸುವಿಕೆಗಾಗಿ ಹಿಂದಿನ ಕಪ್ಪುಬಿಳುಪು ಚಿತ್ರಗಳ ಅಥವಾ ಚಿತ್ರಗಳೇ ಇಲ್ಲದ ಆವೃತ್ತಿಗಳ ಬದಲಿಗೆ ಇನ್ನು ಮುಂದೆ ಇವಿಎಂ ಮತಪತ್ರಗಳಲ್ಲಿ ಅಭ್ಯರ್ಥಿಗಳ ಚಿತ್ರಗಳು ವರ್ಣದಲ್ಲಿ ಮುದ್ರಣಗೊಳ್ಳಲಿವೆ. ಜೊತೆಗೆ ಉತ್ತಮ ಗೋಚರತೆಗಾಗಿ ಅಭ್ಯರ್ಥಿಯ ಕ್ರಮ ಸಂಖ್ಯೆಯನ್ನು ಎದ್ದು ಕಾಣುವಂತೆ ಮುದ್ರಿಸಲಾಗುವುದು.

ಹಿಂದಿನ ಮಾರ್ಗಸೂಚಿಗಳಲ್ಲಿ ಹೆಸರು, ಪಕ್ಷದ ಚಿಹ್ನೆ, ಅನುಕ್ರಮ ಸಂಖ್ಯೆಯಂತಹ ಅಭ್ಯರ್ಥಿಯ ಪ್ರಾಥಮಿಕ ವಿವರಗಳು ಮಾತ್ರ ಅಗತ್ಯವಾಗಿದ್ದವು. ಜೊತೆಗೆ ಚಿತ್ರಗಳು ಇರುತ್ತಿರಲಿಲ್ಲ, ಇದ್ದರೂ ಕಪ್ಪುಬಿಳುಪಿನದಾಗಿರುತ್ತಿದ್ದವು ಮತ್ತು ತುಲನಾತ್ಮಕವಾಗಿ ಚಿಕ್ಕ ಗಾತ್ರದಲ್ಲಿರುತ್ತಿದ್ದವು. ನೂತನ ನಿಯಮಗಳಡಿ ಅಭ್ಯರ್ಥಿಯ ಮುಖವು ಚೆನ್ನಾಗಿ ಗೋಚರಿಸುವಂತೆ ಚಿತ್ರದ ಜಾಗದ ಮುಕ್ಕಾಲು ಭಾಗವನ್ನು ಆವರಿಸಿಕೊಳ್ಳಲಿದೆ.

ಪರಿಷ್ಕೃತ ನಿಯಮಗಳಡಿ ಮತಪತ್ರಗಳನ್ನು ಹೆಚ್ಚು ಮತದಾರ ಸ್ನೇಹಿಯನ್ನಾಗಿಸಲು ಮತ್ತು ಮತಗಟ್ಟೆಗಳಲ್ಲಿ ಗೊಂದಲವನ್ನು ತಗ್ಗಿಸಲು ವಿನ್ಯಾಸ ಮತ್ತು ಮುದ್ರಣ ಎರಡನ್ನೂ ಬದಲಿಸಲಾಗಿದೆ.

ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಮತದಾರರಿಗೆ ಅನುಕೂಲತೆಯನ್ನು ಹೆಚ್ಚಿಸಲು ಚುನಾವಣಾ ಆಯೋಗವು ಈಗಾಗಲೇ ಕಳೆದ ಆರು ತಿಂಗಳುಗಳಲ್ಲಿ 28 ಉಪಕ್ರಮಗಳನ್ನು ಕೈಗೊಂಡಿದೆ.

ಹೊಸದೇನಿರಲಿವೆ?

ಅಭ್ಯರ್ಥಿಗಳ ಚಿತ್ರಗಳನ್ನು ವರ್ಣದಲ್ಲಿ ಮುದ್ರಿಸುವ ಜೊತೆಗೆ ಉತ್ತಮ ಗೋಚರತೆಗಾಗಿ ಅಭ್ಯರ್ಥಿಯ ಮುಖವು ಚಿತ್ರದ ಮುಕ್ಕಾಲು ಭಾಗವನ್ನು ಆವರಿಸಿಕೊಳ್ಳಲಿದೆ.

ಅಭ್ಯರ್ಥಿಯ ಅಥವಾ ನೋಟಾ ಕ್ರಮಸಂಖ್ಯೆ ಸ್ಪಷ್ಟತೆಗಾಗಿ 30 ಫಾಂಟ್ ಗಾತ್ರದಲ್ಲಿ ಎದ್ದು ಕಾಣುವಂತಿರುತ್ತದೆ.

ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಅಭ್ಯರ್ಥಿಗಳ ಹೆಸರುಗಳು ಅಥವಾ ನೋಟಾ ಸುಲಭವಾಗಿ ಓದಲು ಸಾಧ್ಯವಾಗುವಂತೆ ಒಂದೇ ಗಾತ್ರದ ಅಕ್ಷರಗಳಲ್ಲಿರಲಿವೆ.

ಇವಿಎಂ ಮತಪತ್ರಗಳನ್ನು 70 ಜಿಎಸ್‌ಎಂ ಕಾಗದದಲ್ಲಿ ಮುದ್ರಿಸಲಾಗುತ್ತದೆ. ವಿಧಾನಸಭಾ ಚುನಾವಣೆಗಳಿಗಾಗಿ ನಿರ್ದಿಷ್ಟ ಆರ್‌ಜಿಬಿ ಮೌಲ್ಯಗಳನ್ನು ಹೊಂದಿರುವ ಗುಲಾಬಿ ವರ್ಣದ ಕಾಗದವನ್ನು ಬಳಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News