ಮಹಾರಾಷ್ಟ್ರ | ವಿವಾದದ ಬಳಿಕ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳ ಕುರಿತ ಪೋಸ್ಟ್ ಡಿಲೀಟ್ ಮಾಡಿದ ಚುನಾವಣಾ ತಜ್ಞ!
PC : indiatoday.in
ಹೊಸ ದಿಲ್ಲಿ: ಖ್ಯಾತ ಚುನಾವಣಾ ತಜ್ಞ ಹಾಗೂ ಲೋಕನೀತಿ-ಸಿಎಸ್‌ಡಿಎಸ್ ಸಂಸ್ಥೆಯ ಸಹ ನಿರ್ದೇಶಕ ಸಂಜಯ್ ಕುಮಾರ್ ಅವರು ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ವೊಂದು ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದೆ. ಮಹಾರಾಷ್ಟ್ರದ ಪಶ್ಚಿಮ ನಾಶಿಕ್ ಹಾಗೂ ಹಿಂಗ್ನಾ ವಿಧಾನಸಭಾ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದ ಮತದಾರರ ಸಂಖ್ಯೆ ಏರಿಕೆಯಾಗಿತ್ತು ಎಂದು
ಪೋಸ್ಟ್‌ನಲ್ಲಿ ಹೇಳಿದ್ದರು. ಅವರ ಹೇಳಿಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಮತ ಕಳ್ಳತನ’ದ ಆರೋಪವನ್ನು ಸಮರ್ಥಿಸುವಂತಿತ್ತು.
ಸಂಜಯ್ ಕುಮಾರ್ ಅವರು ಈ ದತ್ತಾಂಶವನ್ನು ಆಗಸ್ಟ್ 17ರಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ನಲ್ಲಿ ಅವರು ಪಶ್ಚಿಮ ನಾಶಿಕ್ ಹಾಗೂ ಹಿಂಗ್ನಾ ವಿಧಾನಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ. 47.38 ಹಾಗೂ ಶೇ. 43.08ರಷ್ಟು ಮತದಾರರ ಪ್ರಮಾಣ ಏರಿಕೆಯಾಗಿತ್ತು ಎಂದು ಪ್ರತಿಪಾದಿಸಿದ್ದರು.
ಆ ಪೋಸ್ಟ್ ಅನ್ನು ಅಳಿಸಿ ಹಾಕಿರುವ ಸಂಜಯ್ ಕುಮಾರ್, “ಮಹಾರಾಷ್ಟ್ರ ಚುನಾವಣೆ ಕುರಿತು ಮಾಡಿದ್ದ ಪೋಸ್ಟ್ ಗಳಿಗಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. 2024ರ ಲೋಕಸಭಾ ಚುನಾವಣೆ ಹಾಗೂ 2024ರ ವಿಧಾನಸಭಾ ಚುನಾವಣೆಯ ದತ್ತಾಂಶಗಳನ್ನು ಹೋಲಿಕೆ ಮಾಡುವಾಗ ಲೋಪ ಸಂಭವಿಸಿದೆ. ಸದ್ಯ ವಿವಾದಕ್ಕೀಡಾಗಿರುವ ದತ್ತಾಂಶವನ್ನು ನಮ್ಮ ದತ್ತಾಂಶ ತಂಡ ತಪ್ಪಾಗಿ ಓದಿಕೊಂಡಿದೆ. ಹೀಗಾಗಿ, ಆ ಟ್ವೀಟ್ ಅನ್ನು ತೆಗೆದು ಹಾಕಲಾಗಿದೆ. ನನಗೆ ಯಾವುದೇ ಬಗೆಯ ತಪ್ಪು ಮಾಹಿತಿಯನ್ನು ಹಂಚುವ ಉದ್ದೇಶವಿರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಈ ಟ್ವೀಟ್ ಗಳು ವಿವಾದದ ಸ್ವರೂಪಕ್ಕೆ ತಿರುಗಿದ್ದು, ಸಂಜಯ್ ಕುಮಾರ್ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ. “ಇದು ಪ್ರಾಮಾಣಿಕ ತಪ್ಪು ಎಂದು ಅನ್ನಿಸುತ್ತಿಲ್ಲ” ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಮಾಳವಿಯಾ, ಮಹಾರಾಷ್ಟ್ರ ಚುನಾವಣೆ ಕುರಿತ ಕಾಂಗ್ರೆಸ್ ನ ಸುಳ್ಳು ಆರೋಪಕ್ಕೆ ತುಪ್ಪ ಸುರಿಯುವಂತೆ ಸಿಎಸ್‌ಡಿಎಸ್ ಯಾವುದೇ ಪರಿಶೀಲನೆ ನಡೆಸದೆ ದತ್ತಾಂಶವನ್ನು ಹಂಚಿಕೊಂಡಿದೆ. ಇದು ವಿಶ್ಲೇಷಣೆಯಲ್ಲ, ಪೂರ್ವಾಗ್ರಹದ ದೃಡೀಕರಣ, ಸಂಜಯ್ ಕುಮಾರ್ ಹಾಗೂ ಯೋಗೇಂದ್ರ ಯಾದವ್ ಅವರಂತಹವರ ಉಪದೇಶಗಳನ್ನು
ನಾವೀಗ ಚಿಟಿಕೆಯಿಂದ ಮಾತ್ರ ಪರಿಗಣಿಸುವುದಲ್ಲ, ಬದಲಿಗೆ ಉಪ್ಪಿನ ಮೂಟೆಯೊಂದಿಗೇ ಪರಿಗಣಿಸಬೇಕಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಈ ನಡುವೆ, ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲೂ ಮತಗಳ್ಳತನ ನಡೆಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಬಿಹಾರದಾದ್ಯಂತ ‘ಮತದಾರರ ಅಧಿಕಾರ ಯಾತ್ರೆʼ ನಡೆಸುತ್ತಿದೆ.