ಮೂರು ಪ್ರಬಲ ಸ್ಫೋಟಕ್ಕೆ ತತ್ತರಿಸಿದ ಲಾಹೋರ್: ಕರಾಚಿ, ಲಾಹೋರ್, ಸಿಯಾಲ್‍ಕೋಟ್‍ನಲ್ಲಿ ವಿಮಾನ ಸಂಚಾರ ಅಮಾನತು
ಸಾಂದರ್ಭಿಕ ಚಿತ್ರ | PC : freepik.com
ಇಸ್ಲಾಮಾಬಾದ್ : ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಯನ್ನು ಗುರಿಯಾಗಿಸಿ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಮರುದಿನವೇ ಪಾಕಿಸ್ತಾನದ ಲಾಹೋರ್ ನಲ್ಲಿ ಮೂರು ಸ್ಫೋಟ ಸಂಭವಿಸಿದ್ದು ಜನರು ಭಯದಿಂದ ಮನೆಯಿಂದ ಹೊರಗೋಡಿದರು ಎಂದು ಮೂಲಗಳನ್ನು ಉಲ್ಲೇಖಿಸಿ ಎಆರ್‍ವೈ ನ್ಯೂಸ್ ವರದಿ ಮಾಡಿದೆ.
ಗುರುವಾರ ಲಾಹೋರ್ ನ ಅತ್ಯಂತ ಸೂಕ್ಷ್ಮ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಗುಲ್ಬೆರ್ಗ್‍ನ ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ರಸ್ತೆಯಲ್ಲಿ ಕೆಲ ನಿಮಿಷಗಳ ಅಂತರದಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ವಾಲ್ಟನ್ ವಿಮಾನ ನಿಲ್ದಾಣದ 9 ಕಿ.ಮೀ ವ್ಯಾಪ್ತಿಯಲ್ಲಿರುವ ಡಿಎಚ್‍ಎ 3 ಮತ್ತು 4ನೇ ಹಂತದಲ್ಲಿ ಸ್ಫೋಟ ಸಂಭವಿಸಿದ್ದು ಬೆಂಕಿಯ ಜ್ವಾಲೆ ಮತ್ತು ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ಗೋಪಾಲ ನಗರ ಮತ್ತು ನಸೀರಾಬಾದ್ ನಗರಗಳಲ್ಲಿಯೂ ಸ್ಫೋಟ ಸಂಭವಿಸಿದೆ.
ಸ್ಫೋಟದ ಹಿನ್ನೆಲೆಯಲ್ಲಿ ಕರಾಚಿ, ಲಾಹೋರ್ ಮತ್ತು ಸಿಯಾಲ್‍ಕೋಟ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿರುವುದಾಗಿ ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರ(ಸಿಎಎ) ಘೋಷಿಸಿದೆ. ಮನೆಯೊಳಗೇ ಇರುವಂತೆ ಜನರಿಗೆ ಸಲಹೆ ನೀಡಲಾಗಿದ್ದು ಕ್ಷಿಪಣಿ ದಾಳಿಯಿಂದ ಸ್ಫೋಟ ಸಂಭವಿಸಿರುವುದಾಗಿ ಕೆಲವು ಸ್ಥಳೀಯ ಮೂಲಗಳು ವರದಿ ಮಾಡಿವೆ. ಆದರೆ ಪೊಲೀಸರು ಅಥವಾ ಸೇನಾಪಡೆಯ ಮೂಲಗಳು ಇದನ್ನು ದೃಢಪಡಿಸಿಲ್ಲ.
ತುರ್ತು ಕಾರ್ಯಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸುಮಾರು ಐದು ಕಿ.ಮೀ. ದೂರದವರೆಗೆ ಸ್ಫೋಟದ ಸದ್ದು ಕೇಳಿಸಿದ್ದು ಜನತೆ ಆತಂಕಗೊಂಡು ಮನೆಯಿಂದ ಹೊರಗೋಡಿದರು . ಸ್ಫೋಟದ ಬಗ್ಗೆ ತನಿಖೆ ಮುಂದುವರಿದಿದೆ. ಅಧಿಕಾರಿಗಳು ಪ್ರದೇಶವನ್ನು ಸೀಲ್ ಮಾಡಿದ್ದು ಸಂಬಂಧವಿಲ್ಲದ ಜನರು ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಗುಪ್ತಚರ ತಂಡಗಳು ಪ್ರಾಥಮಿಕ ಪರಿಶೀಲನೆಯನ್ನು ಆರಂಭಿಸಿವೆ ಎಂದು ವರದಿ ಹೇಳಿದೆ.