×
Ad

FACT CHECK | ಸಾಚಾರ್ ಆಯೋಗದ ಪ್ರಸ್ತಾವಗಳ ಕುರಿತು ವೈರಲ್ ಆಗಿರುವ ಹೇಳಿಕೆ, ಅನುಷ್ಠಾನಕ್ಕಾಗಿ ಉವೈಸಿ ಬೇಡಿಕೆ ಎರಡೂ ಸುಳ್ಳು

Update: 2025-05-04 18:27 IST

ಅಸದುದ್ದೀನ್ ಉವೈಸಿ (Photo: ANI)

ಮಂಗಳೂರು: ಸಾಚಾರ್ ಆಯೋಗದ ಪ್ರಸ್ತಾವಗಳ ಕುರಿತು ಹಲವಾರು ಆಘಾತಕಾರಿ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ಒಳಗೊಂಡಿರುವ ವೈರಲ್ ಸಂದೇಶವೊಂದು ವಾಟ್ಸ್‌ಆ್ಯಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. 2005ರಲ್ಲಿ ಆಗಿನ ಯುಪಿಎ ಸರಕಾರವು ಮುಸ್ಲಿಮರ ಸ್ಥಿತಿಗತಿಯ ಅಧ್ಯಯನಕ್ಕಾಗಿ ಸಾಚಾರ್ ಆಯೋಗವನ್ನು ರಚಿಸಿತ್ತು.

ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿಯವರು ಆಗಾಗ್ಗೆ ತನ್ನ ಸಾರ್ವಜನಿಕ ಭಾಷಣಗಳಲ್ಲಿ ಸಾಚಾರ್ ಆಯೋಗದ ವರದಿಯ ಅನುಷ್ಠಾನಕ್ಕಾಗಿ ಒತ್ತಾಯಿಸುತ್ತಾರೆ ಎಂದು ಹೇಳುವ ಮೂಲಕ ಸಂದೇಶವು ಆರಂಭಗೊಳ್ಳುತ್ತದೆ. ಬಳಿಕ ವರದಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿರುವ ಅದು, ಒಂದು ಮುಸ್ಲಿಮ್ ಮತವನ್ನು ಎರಡನ್ನಾಗಿ ಪರಿಗಣಿಸುವುದು, ಮುಸ್ಲಿಮರಿಗೆ ಶಾಸಕಾಂಗಗಳಲ್ಲಿ ಶೇ.40ರಷ್ಟು ಸ್ಥಾನಗಳ ಮೀಸಲು ಮತ್ತು ಭಾರತದ ಬಜೆಟ್‌ನಲ್ಲಿ ಶೇ.20ರಷ್ಟು ನಿಧಿಯ ಹಂಚಿಕೆಯಂತಹ ಹೆಚ್ಚಿನ ಲಾಭಗಳನ್ನು ಸಮುದಾಯಕ್ಕೆ ಒದಗಿಸುವಂತೆ ಸೂಚಿಸಿದೆ ಎಂಬ ಸುಳ್ಳುಗಳನ್ನು ಪ್ರತಿಪಾದಿಸಿದೆ.

ಸಾಚಾರ್ ಆಯೋಗದ ವರದಿಯ ಅನುಷ್ಠಾನವನ್ನು ತಡೆದಿದ್ದಕ್ಕಾಗಿ ಬಿಜೆಪಿಯನ್ನು ಶ್ಲಾಘಿಸುವುದರೊಂದಿಗೆ ಅಂತ್ಯಗೊಂಡಿರುವ ಸಂದೇಶವು, ವರದಿಯನ್ನು ಜಾರಿಗೊಳಿಸಿದ್ದರೆ ‘ಭಾರತವು ತಾಲಿಬಾನ್ ಶೈಲಿಯ ದೇಶವಾಗಿ ಬದಲಾಗುತ್ತಿತ್ತು’ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಈ ಹೇಳಿಕೆಗಳಲ್ಲಿ ಏನಾದರೂ ಸತ್ಯವಿದೆಯೇ? ಪರಿಶೀಲಿಸೋಣ

ವೈರಲ್ ಸಂದೇಶದಲ್ಲಿ ಇರುವುದೇನು?

ಅಸದುದ್ದೀನ್ ಉವೈಸಿ ಸಾಚಾರ್ ವರದಿಯ ಅನುಷ್ಠಾನಕ್ಕಾಗಿ ಆಗಾಗ್ಗೆ ಒತ್ತಾಯಿಸುತ್ತಿರುತ್ತಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2005ರಲ್ಲಿ ಮುಸ್ಲಿಮರನ್ನು ಓಲೈಸಲು ಮತ್ತು ದೇಶವನ್ನು ವಿಭಜಿಸಲು ಆಯೋಗವನ್ನು ರಚಿಸಿತ್ತು.

ಆಯೋಗವು 10 ಆಘಾತಕಾರಿ ಶಿಫಾರಸುಗಳನ್ನು ಮಾಡಿತ್ತು:

► ಮುಸ್ಲಿಮರಿಗೆ ಇಮ್ಮಡಿ ಮತದಾನದ ಹಕ್ಕು

► ಒಬಿಸಿ,ಎಸ್‌ಸಿ ಮತ್ತು ಎಸ್‌ಟಿ ಕೋಟಾಗಳಲ್ಲಿ ಮುಸ್ಲಿಮರ ಸೇರ್ಪಡೆ

► ಭಾರತದ ಒಟ್ಟು ಬಜೆಟ್‌ನಲ್ಲಿ ಮುಸ್ಲಿಮರಿಗೆ ಶೇ.20ರಷ್ಟು ಹಂಚಿಕೆ

► ಐಐಟಿ,ಐಐಎಂ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಮುಸ್ಲಿಮರಿಗೆ ಉಚಿತ ಶಿಕ್ಷಣ

► ಐಎಎಸ್ ಮತ್ತು ನ್ಯಾಯಾಂಗ ಹುದ್ದೆಗಳಲ್ಲಿ ಮದರಸ ಪದವಿಗಳಿಗೆ ಮಾನ್ಯತೆ

► ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮುಸ್ಲಿಮರಿಗೆ ಶೇ.30ರಿಂದ ಶೇ.40ರಷ್ಟು ಸ್ಥಾನಗಳ ಮೀಸಲಾತಿ

► ಶೇ.50ರಷ್ಟು ಸರಕಾರಿ ಉದ್ಯೋಗಗಳು ಮುಸ್ಲಿಮರಿಗೆ

► ಮುಸ್ಲಿಮ್ ಯುವಜನರಿಗೆ 10 ಲ.ರೂ.ವರೆಗೆ ನಗದು ಪ್ರಯೋಜನ

► ಮುಸ್ಲಿಮರ ಜನಸಂಖ್ಯೆ ಶೇ.25ಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಅವರಿಗಾಗಿ ಮೀಸಲು ಕ್ಷೇತ್ರಗಳು

ರಿಯಾಲಿಟಿ ಚೆಕ್: ಏನದು ಸಾಚಾರ್ ಆಯೋಗ?

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ಭಾರತದಲ್ಲಿ ಮುಸ್ಲಿಮರ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ ಅಧ್ಯಯನಕ್ಕಾಗಿ ಸಾಚಾರ್ ಆಯೋಗ(ಔಪಚಾರಿಕವಾಗಿ ಪ್ರಧಾನ ಮಂತ್ರಿಗಳ ಉನ್ನತ ಮಟ್ಟದ ಸಮಿತಿ ಎಂದು ಕರೆಯಲಾಗುತ್ತದೆ)ವನ್ನು ಮಾರ್ಚ್ 2005ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ನ್ಯಾ.ರಾಜಿಂದರ್ ಸಾಚಾರ್ ನೇತೃತ್ವದಲ್ಲಿ ರಚಿಸಿತ್ತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಯೋಗದ ರಚನೆಯನ್ನು ಬೆಂಬಲಿಸಿದ್ದರು.

ಅದು ನೀತಿ ನಿರೂಪಣಾ ಸಂಸ್ಥೆಯಾಗಿರಲಿಲ್ಲ. ಅದು ಕೇವಲ ದತ್ತಾಂಶಗಳ ಅಧ್ಯಯನ ನಡೆಸಿತ್ತು ಮತ್ತು 2006ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರು ಕಡೆಗಣಿಸಲ್ಪಡುತ್ತಿರುವುದನ್ನು ವರದಿಯು ಎತ್ತಿ ತೋರಿಸಿತ್ತು.

ವರದಿಯು ಮುಸ್ಲಿಮರ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಶಿಫಾರಸುಗಳನ್ನು ಮಾಡಿತ್ತು. ಆದರೆ ವೈರಲ್ ಆಗಿರುವ ಸಂದೇಶದಲ್ಲಿಯ ಯಾವುದೇ ಉತ್ಪ್ರೇಕ್ಷಿತ ಮತ್ತು ಕೋಮುವಾದಿ ಹೇಳಿಕೆಗಳು ವಾಸ್ತವ ವರದಿಯ ಭಾಗವಾಗಿರಲಿಲ್ಲ.

ಪ್ರಮುಖ ಹೇಳಿಕೆಗಳ ಸತ್ಯಾಸತ್ಯತೆ ಪರಿಶೀಲನೆ

ಹೇಳಿಕೆ 1.ಉವೈಸಿ ಸಾಚಾರ್ ವರದಿಯ ಅನುಷ್ಠಾನಕ್ಕಾಗಿ ಒತ್ತಾಯಿಸುತ್ತಿರುತ್ತಾರೆ.

ಭಾಗಶಃ ನಿಜ.

ಸಾಚಾರ್ ಸಮಿತಿಯ ವರದಿಯ ಆಧಾರದಲ್ಲಿ,‌ ವಿಶೇಷವಾಗಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮುಸ್ಲಿಮರ ಹಿಂದುಳಿದಿರುವಿಕೆಯ ಕುರಿತು ಕ್ರಮವನ್ನು ತೆಗೆದುಕೊಳ್ಳುವಂತೆ ಉವೈಸಿ ಹಲವಾರು ಸಂದರ್ಭಗಳಲ್ಲಿ ಸರಕಾರವನ್ನು ಕೇಳಿಕೊಂಡಿದ್ದಾರೆ. ಆದರೆ ಇಮ್ಮಡಿ ಮತದಾನ ಹಕ್ಕು ಅಥವಾ ಸಂವಿಧಾನಬಾಹಿರ ಸೌಲಭ್ಯಗಳಿಗಾಗಿ ಅವರೆಂದೂ ಆಗ್ರಹಿಸಿಲ್ಲ. ವೈರಲ್ ಸಂದೇಶವು ನಕಲಿ ಶಿಫಾರಸುಗಳೊಂದಿಗೆ ಅವರ ನಂಟು ಕಲ್ಪಿಸುವ ಮೂಲಕ ಅವರ ನಿಲುವನ್ನು ತಪ್ಪಾಗಿ ಪ್ರತಿನಿಧಿಸಿದೆ.

ಹೇಳಿಕೆ 2. ಒಂದು ಮುಸ್ಲಿಮ್ ಮತವನ್ನು ಎರಡನ್ನಾಗಿ ಪರಿಗಣಿಸಬೇಕು

ಸುಳ್ಳು, ಇದು ಸಂಪೂರ್ಣವಾಗಿ ಕಟ್ಟುಕಥೆ. ಧರ್ಮದ ಆಧಾರದ ಮೇಲೆ ಮತಗಳ ಮೌಲ್ಯವನ್ನು ಬದಲಿಸುವ ಯಾವುದೇ ಉಲ್ಲೇಖವು ಸಾಚಾರ್ ವರದಿಯಲ್ಲಿಲ್ಲ.

ಹೇಳಿಕೆ 3.ಮುಸ್ಲಿಮರಿಗೆ ಶೇ.30ರಿಂದ ಶೇ.40ರಷ್ಟು ಸ್ಥಾನಗಳು ಮೀಸಲು

ಸುಳ್ಳು. ವರದಿಯು ಎಂದಿಗೂ ಧರ್ಮದ ಆಧಾರದಲ್ಲಿ ರಾಜಕೀಯ ಮೀಸಲಾತಿಗಳನ್ನು ಶಿಫಾರಸು ಮಾಡಿಲ್ಲ. ರಾಜಕೀಯದಲ್ಲಿ ಮತ್ತು ಆಡಳಿತದಲ್ಲಿ ಮುಸ್ಲಿಮರ ಕಡಿಮೆ ಪ್ರಾತಿನಿಧ್ಯವನ್ನು ಅದು ಬೆಟ್ಟು ಮಾಡಿದೆಯಷ್ಟೇ.

ಹೇಳಿಕೆ 4.ರಾಷ್ಟ್ರೀಯ ಬಜೆಟ್‌ನ ಶೇ.20ರಷ್ಟು ಮುಸ್ಲಿಮರಿಗೆ ಹಂಚಿಕೆ

ಸುಳ್ಳು,ವರದಿಯಲ್ಲಿ ಇಂತಹ ಯಾವುದೇ ಶಿಫಾರಸು ಇಲ್ಲ. ಅಸ್ತಿತ್ವದಲ್ಲಿರುವ ಅಭಿವೃದ್ಧಿ ಯೋಜನೆಗಳು ಮುಸ್ಲಿಮರು ಸೇರಿದಂತೆ ಎಲ್ಲ ಹಿಂದುಳಿದ ಸಮುದಾಯಗಳನ್ನು ಒಳಗೊಂಡಿದ್ದರೆ ಉತ್ತಮ ಎಂಬ ಸಲಹೆಯನ್ನು ಮಾತ್ರ ಆಯೋಗವು ನೀಡಿದೆ.

ಹೇಳಿಕೆ 5. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ

ಸುಳ್ಳು. ವರದಿಯು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಸಾರ್ವತ್ರಿಕ ಲಭ್ಯತೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಐಐಟಿಗಳು,ಐಐಎಮ್‌ಗಳು ಅಥವಾ ಮೆಡಿಕಲ್ ಕಾಲೇಜುಗಳಲ್ಲಿ ಧರ್ಮಾಧಾರಿತ ಉಚಿತ ಸೀಟುಗಳನ್ನು ಅದು ಪ್ರಸ್ತಾವಿಸಿಲ್ಲ.

ಹೇಳಿಕೆ 6.ಐಎಎಸ್ ಅಥವಾ ನ್ಯಾಯಾಂಗದಲ್ಲಿ ಮದರಸ ಪದವಿಗಳು ಮಾನ್ಯತೆ ಹೊಂದಿರಬೇಕು

ಇದು ದಾರಿ ತಪ್ಪಿಸುವ ಹೇಳಿಕೆ.

ಮದರಸಗಳ ಆಧುನೀಕರಣ ಮತ್ತು ಪಠ್ಯಕ್ರಮದಲ್ಲಿ ಆಧುನಿಕ ವಿಷಯಗಳ ಸೇರ್ಪಡೆಯನ್ನು ಆಯೋಗವು ಉತ್ತೇಜಿಸಿದೆ. ಐಎಎಸ್ ಅಥವಾ ನ್ಯಾಯಾಧೀಶ ಹುದ್ದೆಗೆ ಸಾಂಪ್ರದಾಯಿಕ ಧಾರ್ಮಿಕ ಪದವಿಗಳನ್ನು ಅದು ಶಿಫಾರಸು ಮಾಡಿಲ್ಲ.

ಹೇಳಿಕೆ 7. ಶೇ.50ರಷ್ಟು ಉದ್ಯೋಗಗಳು ಮುಸ್ಲಿಮರಿಗೆ

ಸುಳ್ಳು. ಇದು ಆಧಾರರಹಿತ ಹೇಳಿಕೆ. ವರದಿಯು ನೇಮಕಾತಿಗಳಲ್ಲಿ ತಾರತಮ್ಯ ನಿವಾರಣೆಗೆ ಕರೆ ನೀಡಿದೆಯೇ ಹೊರತು ಧರ್ಮ ಆಧಾರಿತ ಉದ್ಯೋಗ ಮೀಸಲಾತಿಗೆ ಶಿಫಾರಸು ಮಾಡಿಲ್ಲ.

ಹೇಳಿಕೆ 8: ಮುಸ್ಲಿಮ್ ಯುವಜನರಿಗೆ ನಗದು ವಿತರಣೆ

ಸುಳ್ಳು. ಮುಸ್ಲಿಮರಿಗೆ 5-10 ಲಕ್ಷ ರೂ.ಗಳನ್ನು ನೀಡುವ ಬಗ್ಗೆ ಯಾವುದೇ ಉಲ್ಲೇಖ ವರದಿಯಲ್ಲಿಲ್ಲ. ಇತರ ಸಮುದಾಯಗಳಿಗೆ ಇರುವಂತೆ ಬಡ ಮುಸ್ಲಿಮರಿಗೆ ಶೈಕ್ಷಣಿಕ ಬೆಂಬಲ ಮತ್ತು ಕೌಶಲ್ಯಾಭಿವೃದ್ಧಿಗಾಗಿ ಯೋಜನೆಗಳನ್ನು ಅದು ಸೂಚಿಸಿದೆ.

ಹೇಳಿಕೆ 9.ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮೀಸಲು ಕ್ಷೇತ್ರಗಳು

ಸುಳ್ಳು ಮತ್ತು ಅಸಾಂವಿಧಾನಿಕ. ಭಾರತೀಯ ಕಾನೂನುಗಳು ಧರ್ಮದ ಆಧಾರದಲ್ಲಿ ಕ್ಷೇತ್ರಗಳ ಚುನವಣಾ ಮೀಸಲಾತಿಯನ್ನು ಅನುಮತಿಸುವುದಿಲ್ಲ. ಸಾಚಾರ್ ವರದಿಯೂ ಅದಕ್ಕಾಗಿ ಶಿಫಾರಸು ಮಾಡಿಲ್ಲ.

ಸಾಚಾರ್ ವರದಿಯು ನಿಜಕ್ಕೂ ಕಂಡುಕೊಂಡಿದ್ದೇನು?

ಮುಸ್ಲಿಮರಲ್ಲಿ ಕಡಿಮೆ ಸಾಕ್ಷರತೆ ಮಟ್ಟ; ಬ್ಯಾಂಕ್ ಸಾಲಗಳು ಮತ್ತು ಸರಕಾರಿ ಯೋಜನೆಗಳ ಕಡಿಮೆ ಲಭ್ಯತೆ; ಸರಕಾರಿ ಉದ್ಯೋಗಗಳು ಮತ್ತು ಪೋಲಿಸ್ ಇಲಾಖೆಯಲ್ಲಿ ಕಡಿಮೆ ಪ್ರಾತಿನಿಧ್ಯ;ದಲಿತರು ಮತ್ತು ಆದಿವಾಸಿಗಳಂತೆ ಅಥವಾ ಅದಕ್ಕಿಂತ ಕೆಟ್ಟದಾದ ಅತ್ಯಂತ ಕಳಪೆ ಸಾಮಾಜಿಕ-ಆರ್ಥಿಕ ಸೂಚಕಗಳು: ಇವು ವರದಿಯು ಕಂಡುಕೊಂಡಿರುವ ಕಟು ಸತ್ಯಾಂಶಗಳು.

ವರದಿಯು ಯಾವುದೇ ಸಮುದಾಯವನ್ನು ದೂಷಿಸಿಲ್ಲ ಅಥವಾ ಯಾವುದೇ ಧರ್ಮಾಧಾರಿತ ಪ್ರಯೋಜನವನ್ನು ಶಿಫಾರಸು ಮಾಡಿಲ್ಲ. ಇತರ ಹಿಂದುಳಿದ ಗುಂಪುಗಳಂತೆ ಮುಸ್ಲಿಮರ ಬಡತನ ಮತ್ತು ಅವರ ಹೊರಗಿಡುವಿಕೆಯನ್ನು ಅಭಿವೃದ್ಧಿ ಸಮಸ್ಯೆಯನ್ನಾಗಿ ಪರಿಗಣಿಸುವಂತೆ ಅದು ಸರಕಾರಕ್ಕೆ ಸೂಚಿಸಿದೆಯಷ್ಟೇ.

ವೈರಲ್ ಸಂದೇಶವು ಸಾಚಾರ್ ಆಯೋಗದ ಕುರಿತು ಸರಣಿ ಸುಳ್ಳು, ಉತ್ಪ್ರೇಕ್ಷಿತ ಮತ್ತು ಕೋಮುವಾದಿ ಹೇಳಿಕೆಗಳನ್ನು ಒಳಗೊಂಡಿದೆ. ಉವೈಸಿ ವರದಿಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದಾರೆ ಎಂಬ ಸುಳ್ಳನ್ನೂ ಅದು ಹೇಳಿದೆ. ವಾಸ್ತವದಲ್ಲಿ ವರದಿಗೆ ಉವೈಸಿಯವರ ಬೆಂಬಲವು ಅಭಿವೃದ್ಧಿಯ ಮೇಲೆ ಅದರ ಗಮನ ಕೇಂದ್ರೀಕರಣವನ್ನು ಆಧರಿಸಿದೆ, ಸಂದೇಶದಲ್ಲಿ ಪಟ್ಟಿ ಮಾಡಲಾಗಿರುವ ಯಾವುದೇ ಕಪೋಲಕಲ್ಪಿತ ಪ್ರಸ್ತಾವಗಳನ್ನಲ್ಲ.

ಸಾಚಾರ್ ವರದಿಯು ನೀತಿ ನಿರ್ಧಾರಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ದತ್ತಾಂಶ ಆಧಾರಿತ ದಾಖಲೆಯಾಗಿದೆ. ಅದು ಯಾವುದೇ ಹಿಂದು-ವಿರೋಧಿ ಅಥವಾ ಮುಸ್ಲಿಂ-ವಿರೋಧಿ ತಾರತಮ್ಯವನ್ನು ಉತ್ತೇಜಿಸುವುದಿಲ್ಲ ಅಥವಾ ವೈರಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿರುವ ಅತಿರೇಕದ ಕ್ರಮಗಳನ್ನೂ ಅದು ಶಿಫಾರಸು ಮಾಡಿಲ್ಲ.

ತೀರ್ಪು:ವೈರಲ್ ಸಂದೇಶವು ಸಂಪೂರ್ಣವಾಗಿ ಸುಳ್ಳುಗಳಿಂದ ತುಂಬಿದೆ. ಅದು ಸಾಚಾರ್ ಆಯೋಗವು ಕಂಡುಕೊಂಡಿರುವ ಅಂಶಗಳು ಮತ್ತು ಉದ್ದೇಶಗಳನ್ನು ಸಾರಾಸಗಟಾಗಿ ತಪ್ಪಾಗಿ ಪ್ರತಿನಿಧಿಸಿದೆ. ಅದು ಕೋಮು ತಪ್ಪುಮಾಹಿತಿಯನ್ನು ಹರಡುವ ಪ್ರಯತ್ನದ ಭಾಗವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಸ್ಮಾಯಿಲ್ ಝೋರೇಝ್

contributor

Similar News