ಅಪಘಾತ ತಡೆ ಕಾರ್ಯದಲ್ಲಿ ಲೋಪ: ಏರ್ ಇಂಡಿಯಾ ಹಾರಾಟ ಸುರಕ್ಷತೆ ಮುಖ್ಯಸ್ಥನ ಅಮಾನತು
ಏರ್ ಇಂಡಿಯಾ| Photo: PTI
ಹೊಸದಿಲ್ಲಿ: ಏರ್ ಇಂಡಿಯಾದ ಅಪಘಾತ ತಡೆ ಚಟುವಟಿಕೆಗಳಲ್ಲಿ ಲೋಪಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ಅದರ ಹಾರಾಟ ಸುರಕ್ಷತೆ ಮುಖ್ಯಸ್ಥನನ್ನು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಒಂದು ತಿಂಗಳ ಅವಧಿಗೆ ಅಮಾನತಿನಲ್ಲಿಟ್ಟಿದೆ.
ಆಂತರಿಕ ಪರಿಶೋಧನೆ, ಅಪಘಾತ ತಡೆ ಚಟುವಟಿಕೆ ಮತ್ತು ಅಗತ್ಯ ತಾಂತ್ರಿಕ ಸಿಬ್ಬಂದಿಯ ಲಭ್ಯತೆ- ಈ ವಿಷಯಗಳಲ್ಲಿ ಡಿಜಿಸಿಎ ತಂಡವೊಂದು ಜುಲೈ 25 ಮತ್ತು 26ರಂದು ಏರ್ ಇಂಡಿಯಾವನ್ನು ಕಣ್ಗಾವಲಿನಲ್ಲಿ ಇಟ್ಟಿತ್ತು. ‘‘ತಾನು ಮಾಡಿರುವುದಾಗಿ ಏರ್ ಇಂಡಿಯಾ ಹೇಳಿಕೊಂಡಿರುವ ಕೆಲವು ಆಂತರಿಕ ಪರಿಶೋಧನೆಗಳು ಮತ್ತು ಅಚ್ಚರಿಯ ತಪಾಸಣೆಗಳನ್ನು ಕಾಟಾಚಾರಕ್ಕಾಗಿ ಮಾಡಲಾಗಿದೆ ಹಾಗೂ ನಿಯಮಗಳಿಗೆ ಅನುಸಾರವಾಗಿ ಮಾಡಲಾಗಿಲ್ಲ’’ ಎಂದು ಡಿಜಿಸಿಎ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಡಿಜಿಸಿಎ ನಿಯಮಗಳಿಗೆ ಅನುಸಾರವಾಗಿ ಮಾಡಬೇಕಾಗಿರುವ ಯಾವುದೇ ಆಂತರಿಕ ಪರಿಶೋಧನೆಗಳು, ಕಣ್ಗಾವಲುಗಳು ಅಥವಾ ಅಚ್ಚರಿಯ ತಪಾಸಣೆಗಳನ್ನು ಅಮಾನತಿಗೆ ಒಳಗಾಗಿರುವ ಅಧಿಕಾರಿಗೆ ವಹಿಸಬಾರದು ಎಂಬುದಾಗಿ ವಾಯುಯಾನ ಸಂಸ್ಥೆಗೆ ಸೂಚಿಸಲಾಗಿದೆ’’ ಎಂದು ಅದು ತಿಳಿಸಿದೆ.