ಉತ್ತರ ಪ್ರದೇಶ | ನಕಲಿ ಪೊಲೀಸ್ ಠಾಣೆ ತೆರೆದು ವಂಚನೆ : 6 ಮಂದಿ ಆರೋಪಿಗಳ ಬಂಧನ
Photo : x
ಲಕ್ನೋ, ಆ. 10: ‘‘ಅಂತಾರಾಷ್ಟ್ರೀಯ ಪೊಲೀಸ್ ಹಾಗೂ ಅಪರಾಧ ತನಿಖಾ ಬ್ಯುರೊ’’ ಹೆಸರಲ್ಲಿ ನಕಲಿ ಕಚೇರಿ ನಡೆಸುತ್ತಿದ್ದ ಆರೋಪದಲ್ಲಿ ಆರು ಮಂದಿಯನ್ನು ಗೌತಮ್ ಬುದ್ಧ ನಗರದ ಪೊಲೀಸರು ಬಂಧಿಸಿದ್ದಾರೆ.
ಸರಕಾರಿ ಅಧಿಕಾರಿಗಳಂತೆ ಸೋಗು ಹಾಕಿ ಸಾರ್ವಜನಿಕರನ್ನು ವಂಚಿಸಲು ಹಾಗೂ ಅವರಿಂದ ಹಣ ಸುಲಿಗೆ ಮಾಡಲು ಇವರು ನಕಲಿ ದಾಖಲೆ, ನಕಲಿ ಗುರುತು ಪತ್ರ, ಪೊಲೀಸ್ ಶೈಲಿಯ ಲಾಂಛನಗಳನ್ನು ಬಳಸಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಪ್ರವೃತ್ತವಾದ ಪೊಲೀಸರು ನೋಯ್ಡಾದ ಸೆಕ್ಟರ್ 70 ಬಿಎಸ್ 136ರಲ್ಲಿರುವ ಕಟ್ಟಡದ ಮೇಲೆ ಶನಿವಾರ ತಡ ರಾತ್ರಿ ದಾಳಿ ನಡೆಸಿದ್ದಾರೆ. ಅಲ್ಲಿ ಆರೋಪಿಗಳು ಅಧಿಕೃತ ಸಂಸ್ಥೆಯನ್ನು ಹೋಲುವ ಕಚೇರಿಯನ್ನು ಸ್ಥಾಪಿಸಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಅವರು ಪೊಲೀಸ್ ಇಲಾಖೆ ಬಳಸುವಂತಹ ಬಣ್ಣಗಳು ಹಾಗೂ ಲೋಗೋಗಳನ್ನು ಬಳಸಿದ್ದಾರೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆಯುಷ್ ಸಚಿವಾಲಯ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಕಲಿ ಪ್ರಮಾಣ ಪತ್ರಗಳನ್ನು ಪ್ರದರ್ಶಿಸಿದ್ದಾರೆ. ಇಂಟರ್ ಪೋಲ್, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಯುರೇಷಿಯಾ ಪೋಲ್‌ನೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಬ್ರಿಟನ್‌ನಲ್ಲಿ ಕಚೇರಿ ಹೊಂದಿರುವುದಾಗಿ ಕೂಡ ಪ್ರತಿಪಾದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಸರಕಾರಿ ಅಧಿಕಾರಿಗಳಂತೆ ನಟಿಸಿ, ತಮ್ಮ ವೆಬ್ ಸೈಟ್ www.intlpcrib.in ಮೂಲಕ ದೇಣಿಗೆ ಸಂಗ್ರಹಿಸಿದ್ದಾರೆ. ಕಾನೂನುಬದ್ಧವೆಂದು ಕಾಣಲು ವಿವಿಧ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ನಲ್ಲಿ ಪ್ರದರ್ಶಿಸಿದ್ದಾರೆ. ಜನರ ಮೇಲೆ ಪ್ರಭಾವ ಬೀರಲು ಹಾಗೂ ವಂಚಿಸಲು ಅವರು ಹಲವು ಪತ್ರಿಕೆಗಳ ಗುರುತಿನ ಚೀಟಿ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಗುರುತಿನ ಚೀಟಿ, ಅಧಿಕೃತವಾಗಿ ಕಾಣುವ ಅಂಚೆ ಚೀಟಿಗಳನ್ನು ಇರಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಉತ್ತಮವಾಗಿ ಸಂಘಟಿಸಲಾದ ವಂಚನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಬೇಧಿಸಿದ್ದೇವೆ. ಆರೋಪಿಗಳು ‘‘ಅಂತರರಾಷ್ಟ್ರೀಯ ಪೊಲೀಸ್ ಮತ್ತು ಅಪರಾಧ ತನಿಖೆ ಬ್ಯೂರೊ’’ ಹೆಸರಿನಲ್ಲಿ ಸೆಕ್ಟರ್ 70ರಲ್ಲಿ ನಕಲಿ ಕಚೇರಿಯನ್ನು ಸ್ಥಾಪಿಸಿದ್ದರು. ಸಾರ್ವಜನಿಕರನ್ನು ವಂಚಿಸಲು ಹಾಗೂ ಹಣ ಸುಲಿಗೆ ಮಾಡಲು ಪೊಲೀಸ್ ಇಲಾಖೆ ಬಳಸುವಂತಹ ಲಾಂಛನಗಳು ಹಾಗೂ ಸಚಿವಾಲಯದ ನಕಲಿ ದಾಖಲೆಗಳನ್ನು ಬಳಸಿಕೊಂಡಿದ್ದರು. ದಾಳಿಯ ಸಂದರ್ಭ ನಾವು ಆರು ಮಂದಿ ಶಂಕಿತರನ್ನು ಬಂಧಿಸಿದ್ದೇವೆ. ಅವರಿಂದ ನಕಲಿ ಗುರುತಿನ ಚೀಟಿ, ಸಚಿವಾಲಯದ ಪ್ರಮಾಣ ಪತ್ರಗಳು, ಚೆಕ್ ಪುಸ್ತಕಗಳು, ಎಟಿಎಂ ಕಾರ್ಡ್, ವಿಸಿಟಿಂಗ್ ಕಾರ್ಡ್, ಸೈನ್ ಬೋರ್ಡ್, ಮೊಬೈಲ್ ಫೋನ್ ಹಾಗೂ 42 ಸಾವಿರ ರೂ.ನಗದು ಸೇರಿದಂತೆ ವ್ಯಾಪಕ ಪುರಾವೆಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಸೆಂಟ್ರಲ್ ನೋಯ್ಡಾದ ಡಿಸಿಪಿ ಶಕ್ತಿ ಮೋಹನ್ ಅವಸ್ಥಿ ತಿಳಿಸಿದ್ದಾರೆ.
थाना फेस-3:- संगठित रूप में INTERNATIONAL POLICE & CRIME INVESTIGATION BUREAU के नाम से लोगो को भ्रमित करने के लिए फर्जी ऑफिस बनाकर सरकारी पदाधिकारी का झूठा दिखावा करके व पुलिस जैसा रंग व LOGO लगाकर आम जनता को प्रभाव मे लेकर धोखाधड़ी कर पैसा ऐंठने वाले 06 अभियुक्त गिरफ्तार। pic.twitter.com/KuPfUaC0Vh
— POLICE COMMISSIONERATE GAUTAM BUDDH NAGAR (@noidapolice) August 10, 2025