×
Ad

ತಮಿಳುನಾಡು | ಕಳ್ಳತನದ ಆರೋಪದಲ್ಲಿ ಬಂಧಿತ ದೇವಸ್ಥಾನದ ಕಾವಲುಗಾರ ಮೃತ್ಯು : ಪೊಲೀಸರ ವಿರುದ್ಧ ಚಿತ್ರಹಿಂಸೆ ಆರೋಪಿಸಿದ ಕುಟುಂಬ

Update: 2025-06-29 22:51 IST

Photo | indiatoday

ಚೆನ್ನೈ : ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ಪೊಲೀಸರು ಬಂಧಿಸಿದ್ದ ದೇವಸ್ಥಾನದ ಕಾವಲುಗಾರನೋರ್ವ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದು, ಪೊಲೀಸರ ಚಿತ್ರಹಿಂಸೆಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಅಜಿತ್ ಕುಮಾರ್ ಮೃತರು. ಇವರು ಮಾದಾಪುರಂ ಕಾಳಿಯಮ್ಮನ್ ದೇವಸ್ಥಾನದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು.

ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅಂಗವಿಕಲೆ ಮಹಿಳೆಯೋರ್ವರು ವಾಹನ ಪಾರ್ಕಿಂಗ್ ಮಾಡಲು ಅಜಿತ್ ಅವರ ಸಹಾಯವನ್ನು ಕೋರಿದ್ದರು. ಅಜಿತ್ ಅವರಿಗೆ ಕಾರು ಚಾಲನೆ ತಿಳಿಯದ ಕಾರಣ ಅವರು ಬೇರೆಯವರ ಸಹಾಯವನ್ನು ಕೋರಿದ್ದಾರೆ. ಒಂದು ಗಂಟೆಯ ನಂತರ ಅವರು ಕಾರಿನ ಕೀ ಹಿಂದಿರುಗಿಸಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಕಾರಿನೊಳಗೆ ಇಟ್ಟಿದ್ದ 80 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿವೆ ಎಂದು ಆರೋಪಿಸಿದ್ದರು.

ಆಕೆಯ ದೂರಿನ ಮೇರೆಗೆ ಅಜಿತ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಯಿತು. ಆರಂಭದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದ್ದರೂ, ಅವರನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ. ಆ ಬಳಿಕ ಪೊಲೀಸರು ಅವರು ಮೃತಪಟ್ಟಿರುವ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದರು.

ಅಜಿತ್ ಅವರ ಸಹೋದರ ನವೀನ್ ಈ ಕುರಿತು ಪ್ರತಿಕ್ರಿಯಿಸಿದ್ದು, ಪೊಲೀಸ್ ವಿಚಾರಣೆಯ ಸಮಯದಲ್ಲಿ ಒಟ್ಟು ಐವರನ್ನು ಬಂಧಿಸಿ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಶಿವಗಂಗೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ರಾವತ್ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News