ಮಧ್ಯಪ್ರದೇಶ | ಭೂಮಿ ಮಾರಾಟಕ್ಕೆ ನಿರಾಕರಿಸಿದ ರೈತನ ಮೇಲೆ ಥಾರ್ ಜೀಪ್ ಹರಿಸಿ ಹತ್ಯೆ : ಬಿಜೆಪಿ ನಾಯಕನ ವಿರುದ್ಧ ಆರೋಪ
ರಕ್ಷಣೆಗೆ ಬಂದ ಪುತ್ರಿಯರ ಬಟ್ಟೆ ಹರಿದು ಹಲ್ಲೆ
ಫತೇಘರ್ (ಮಧ್ಯಪ್ರದೇಶ): ಭೂ ವಿವಾದದ ಹಿನ್ನೆಲೆಯಲ್ಲಿ ರೈತನೊಬ್ಬನನ್ನು ಬಿಜೆಪಿ ನಾಯಕನೊಬ್ಬ ಥಾರ್ ಜೀಪ್ ಹರಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಫತೇಘರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶಪುರ ಗ್ರಾಮದಲ್ಲಿ ನಡೆದಿದೆ.
ರೈತ ರಾಮ್ ಸ್ವರೂಪ್ ಧಾಕಡ್ ಅವರು ಪತ್ನಿಯೊಂದಿಗೆ ತಮ್ಮ ಹೊಲಕ್ಕೆ ತೆರಳುತ್ತಿದ್ದ ವೇಳೆ, ಬಿಜೆಪಿ ನಾಯಕ ಮಹೇಂದ್ರ ನಗರ ಮತ್ತು ಅವರ ಸಹಚರರು ದಾರಿಯಲ್ಲಿ ತಡೆದು ಕೋಲು ಮತ್ತು ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದರು. ನಂತರ ಆರೋಪಿಗಳು ಥಾರ್ ಜೀಪ್‌ನಿಂದ ಅವರ ದೇಹದ ಮೇಲೆ ಹರಿಸಿದ್ದು, ರೈತ ಧಾಕಡ್ ಗಂಭೀರವಾಗಿ ಗಾಯಗೊಂಡಿದ್ದರು.
ಧಾಕಡ್ ಅವರನ್ನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಗೆ ಕರೆದೊಯ್ಯಲು ಅವಕಾಶ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸ್ಥಳದಲ್ಲೇ ಬಂದೂಕು ಹಿಡಿದು ಕಾವಲು ಕಾಯುತ್ತಿದ್ದರು. ಕೊನೆಗೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ವೇಳೆ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.
ಬಿಜೆಪಿ ನಾಯಕ ಮಹೇಂದ್ರ ನಗರ ಕಳೆದ ಕೆಲ ತಿಂಗಳಿಂದ ಸಣ್ಣ ರೈತರಿಗೆ ತಮ್ಮ ಭೂಮಿಯನ್ನು ಮಾರಾಟ ಮಾಡಲು ಒತ್ತಡ ಹಾಕುತ್ತಿದ್ದರು. ಧಾಕಡ್ ಅವರು ಭೂಮಿ ಮಾರಾಟಕ್ಕೆ ನಿರಾಕರಿಸಿದ ಕಾರಣದಿಂದಲೇ ಈ ಹತ್ಯೆ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಧಾಕಡ್ ಅವರ ಪುತ್ರಿಯರು ಸಹಾಯಕ್ಕಾಗಿ ಸ್ಥಳಕ್ಕೆ ಧಾವಿಸಿದಾಗ, ಅವರ ಮೇಲೂ ಹಲ್ಲೆ ನಡೆಸಿ ಬಟ್ಟೆ ಹರಿದು ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
“ನನ್ನ ತಂದೆಯನ್ನು ಉಳಿಸಲು ಹೋದಾಗ ಅವರು ನನ್ನ ಮೇಲೂ ದಾಳಿ ನಡೆಸಿದರು, ಗುಂಡು ಹಾರಿಸಿದರು. ನನ್ನ ತಾಯಿ ಮಧ್ಯಪ್ರವೇಶಿಸಲು ಯತ್ನಿಸಿದಾಗ ಅವರು ಕಾರನ್ನು ತಂದೆಯ ಮೇಲೆ ಹರಿಸಿದರು,” ಎಂದು ರೈತನ ಮಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಆರೋಪಿಗಳು ಸುಮಾರು ಒಂದು ಗಂಟೆ ಕಾಲ ಹಲ್ಲೆ ನಡೆಸಿದರು. ಸುಮಾರು 20 ಜನರು ಗಾಳಿಯಲ್ಲಿ ಗುಂಡು ಹಾರಿಸಿ ಗ್ರಾಮಸ್ಥರಲ್ಲಿ ಭೀತಿ ಉಂಟುಮಾಡಿದರು,” ಮೃತ ರೈತನ ಸಹೋದರ ರಾಮ್‌ಕುಮಾರ್ ಹೇಳಿದ್ದಾರೆ.
ಮಹೇಂದ್ರ ನಗರ, ಅವರ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಕೊಲೆ ಮತ್ತು ಇತರೆ ಆರೋಪಗಳಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
“ಸಂತ್ರಸ್ತರ ಕುಟುಂಬದಿಂದ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಶೋಧ ಮುಂದುವರಿದಿದೆ,” ಎಂದು ಫತೇಘರ್ ಠಾಣಾಧಿಕಾರಿ ಜಯನಾರಾಯಣ್ ಶರ್ಮಾ ತಿಳಿಸಿದ್ದಾರೆ.
“ಮಧ್ಯಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹಿಂಸಾಚಾರ, ಲೂಟಿ ಮತ್ತು ಅತ್ಯಾಚಾರ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಮುಖ್ಯಮಂತ್ರಿ ಗೃಹ ಸಚಿವರಾಗಿದ್ದರೂ, ಇಂತಹ ಘಟನೆಗಳು ಅವರ ಕಣ್ಗಾವಲಿನಲ್ಲಿಯೇ ನಡೆಯುತ್ತಿವೆ,” ಎಂದು ಬಮೋರಿಯ ಕಾಂಗ್ರೆಸ್ ಶಾಸಕ ರಿಷಿ ಅಗರ್ವಾಲ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ಮಹೇಂದ್ರ ನಗರ ಕಳೆದ ಹಲವು ವರ್ಷಗಳಿಂದ ಸಣ್ಣ ರೈತರನ್ನು ಬೆದರಿಸುತ್ತಿದ್ದು, ಸುಮಾರು 25 ಮಂದಿ ರೈತರು ತಮ್ಮ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಊರು ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.