×
Ad

131 ದಿನಗಳ ನಂತರ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ರೈತ ನಾಯಕ ಜಗ್ಜೀತ್ ಸಿಂಗ್ ದಲ್ಲೇವಾಲ್

Update: 2025-04-06 19:28 IST

ಜಗ್ಜೀತ್ ಸಿಂಗ್ ದಲ್ಲೇವಾಲ್ | PC : PTI 

ಹೊಸದಿಲ್ಲಿ: ಬೆಳೆಗಳಿಗೆ ಶಾಸನಾತ್ಮಕ ಕನಿಷ್ಠ ಬೆಂಬಲ ಬೆಲೆ ನಿಗದಿ ಹಾಗೂ ಇನ್ನಿತರ ರೈತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕಳೆದ 131 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತ ನಾಯಕ ಜಗ್ಜೀತ್ ಸಿಂಗ್ ದಲ್ಲೇವಾಲ್, ರವಿವಾರ ಅದನ್ನು ಅಂತ್ಯಗೊಳಿಸಿದರು. ಕಳೆದ ವರ್ಷದ ನವೆಂಬರ್ 26ರಿಂದ ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಫತೇಬಾದ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್ ನಲ್ಲಿ ಆಯೋಜಿಸಲಾಗಿದ್ದ ಕಿಸಾನ್ ಮಹಾಪಂಚಾಯತ್ ನ ರೈತರ ಸಭೆಯಲ್ಲಿ ಅವರು ಈ ನಿರ್ಧಾರವನ್ನು ಪ್ರಕಟಿಸಿದರು. ಈ ವೇಳೆ, “ನೀವೆಲ್ಲ ನನ್ನ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಬೇಕು ಎಂದು ಮನವಿ ಮಾಡಿದ್ದಿರಿ. ನೀವು ಚಳವಳಿಯ ಬಗ್ಗೆ ಕಾಳಜಿ ತೆಗೆದುಕೊಂಡಿದ್ದಕ್ಕೆ ನಾನು ನಿಮಗೆ ಕೃತಜ್ಞನಾಗಿದ್ದೇನೆ. ನಾನು ನಿಮ್ಮ ಭಾವನೆಗಳನ್ನು ಗೌರವಿಸಿದ್ದು, ನಿಮ್ಮ ಆದೇಶವನ್ನು ಒಪ್ಪಿಕೊಂಡಿದ್ದೇನೆ” ಎಂದು ರೈತರನ್ನುದ್ದೇಶಿಸಿ ದಲ್ಲೇವಾಲ್ ಹೇಳಿದರು.

ಇದಕ್ಕೂ ಮುನ್ನ, ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಶನಿವಾರ ದಲ್ಲೇವಾಲ್ ರಿಗೆ ಮನವಿ ಮಾಡಿದ್ದರು. ಇದರ ಬೆನ್ನಿಗೇ, ಈ ಪ್ರಕಟಣೆ ಹೊರ ಬಿದ್ದಿದೆ.

ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ರೈತರ ಬೇಡಿಕೆಗಳ ಕುರಿತು ಭಾರತ ಸರಕಾರದ ಪ್ರತಿನಿಧಿಗಳು ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳ ನಡುವಿನ ಮಾತುಕತೆ ಪ್ರಗತಿಯಲ್ಲಿದೆ. ಇದೀಗ ರೈತ ನಾಯಕರಾದ ಜಗ್ಜೀತ್ ಸಿಂಗ್ ದಲ್ಲೇವಾಲ್ ಆಸ್ಪತ್ರೆಯಿಂದ ಮರಳಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ. ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ನಾವು ಅವರಲ್ಲಿ ಮನವಿಯನ್ನೂ ಮಾಡಿದ್ದು, ಈಗಾಗಲೇ ನಿಗದಿಯಾಗಿರುವ ದಿನಾಂಕದಂತೆ, ಮೇ 4ರಂದು ನಾವು ರೈತ ಸಂಘಟನೆಗಳ ಪ್ರತಿನಿಧಿಗಳ ಸಭೆಯನ್ನು ನಡೆಸಲಿದ್ದೇವೆ” ಎಂದು ತಿಳಿಸಿದ್ದರು.

ದಲ್ಲೇವಾಲ್ ರಿಗೆ ಮನವಿ ಮಾಡಿದ್ದ ಬಿಟ್ಟು ಕೂಡಾ, “ಪಂಜಾಬ್ ನ ಜನತೆಗೆ ನಿಮ್ಮ ಆರೋಗ್ಯ ತುಂಬಾ ಮುಖ್ಯವಾಗಿದ್ದು, ನಿಮ್ಮ ಜೀವ ಕೂಡಾ ಅವರ ಪಾಲಿಗೆ ಅಮೂಲ್ಯವಾಗಿದೆ. ರೈತರು ಹಾಗೂ ರೈತ ಕೂಲಿಕಾರರಿಗೆ ನಿಮ್ಮ ನಾಯಕತ್ವ ಎಂದಿಗೂ ಅಗತ್ಯವಾಗಿದೆ” ಎಂದು ಹೇಳಿದ್ದರು.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಝ್ದೂರ್ ಮೋರ್ಚಾ ಸಂಘಟನೆಗಳ ಜಂಟಿ ವೇದಿಕೆಯನ್ನು ಪ್ರತಿನಿಧಿಸುವ ದಲ್ಲೇವಾಲ್, ಶಾಸನಾತ್ಮಕ ಕನಿಷ್ಠ ಬೆಂಬಲ ಬೆಲೆ ಬೇಡಿಕೆ ಸೇರಿದಂತೆ ಪ್ರಮುಖ ರೈತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರಕಾರದ ಮೇಲೆ ಒತ್ತಡ ಹೇರಲು ತಮ್ಮ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು.

ಕಳೆದ ಜನವರಿಯಲ್ಲಿ ರೈತ ನಾಯಕರೊಂದಿಗಿನ ಮಾತುಕತೆಗೆ ಕೇಂದ್ರ ಸರಕಾರವು ಒಪ್ಪಿಕೊಂಡ ನಂತರ, ಖನೌರಿ ಪ್ರತಿಭಟನಾ ಸ್ಥಳದಲ್ಲಿ ವೈದ್ಯಕೀಯ ಆರೈಕೆಯನ್ನು ಸ್ವೀಕರಿಸಲು ದಲ್ಲೇವಾಲ್ ಪ್ರಾರಂಭಿಸಿದ್ದರು. ಆದರೆ, ಆ ವೇಳೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸದಿರುವ ನಿರ್ಧಾರವನ್ನು ಅವರು ಕೈಗೊಂಡಿದ್ದರು.

ಈ ನಡುವೆ, ಮೇ 4ರಂದು ಮತ್ತೆ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಕೇಂದ್ರ ಸರಕಾರ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News