×
Ad

ಭಾರತಕ್ಕಾಗಿ ಗುಂಡೇಟುಗಳನ್ನು ಎದುರಿಸಿದ್ದೇವೆ, ಇನ್ನೊಮ್ಮೆ ಅದಕ್ಕೂ ಸಿದ್ಧರಿದ್ದೇವೆ: ಫಾರೂಕ್ ಅಬ್ದುಲ್ಲಾ

Update: 2026-01-20 22:34 IST

ಫಾರೂಕ್ ಅಬ್ದುಲ್ಲಾ | Photo Credit : PTI 

ಶ್ರೀನಗರ, ಜ. 20: ಜಮ್ಮು–ಕಾಶ್ಮೀರದಲ್ಲಿ ಕಲ್ಲುತೂರಾಟ ಮತ್ತು ಭಯೋತ್ಪಾದನೆಯನ್ನು ಮರುಕಳಿಸಲು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪ್ರಯತ್ನಿಸುತ್ತಿದೆ ಎಂಬ ಬಿಜೆಪಿ ಆರೋಪಗಳನ್ನು ಮಂಗಳವಾರ ಇಲ್ಲಿ ತಿರಸ್ಕರಿಸಿದ ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು, ಪಕ್ಷವು ಭಾರತಕ್ಕಾಗಿ ಗುಂಡೇಟುಗಳನ್ನು ಎದುರಿಸಿದೆ ಮತ್ತು ಅಗತ್ಯವಾದರೆ ಗುಂಡೇಟುಗಳನ್ನು ಇನ್ನೊಮ್ಮೆ ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದರು.

ಇಲ್ಲಿ ಎರಡು ದಿನಗಳ ಎನ್‌ಸಿ ಬ್ಲಾಕ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾವೇಶದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಅಬ್ದುಲ್ಲಾ, ಎನ್‌ಸಿ ಮತ್ತು ಪಿಡಿಪಿ ಅಶಾಂತಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ ಎಂಬ ಹಿರಿಯ ಬಿಜೆಪಿ ನಾಯಕರೋರ್ವರ ಆರೋಪವನ್ನು ತಳ್ಳಿಹಾಕಿದರು.

‘ಅಶಾಂತಿಯನ್ನು ಸೃಷ್ಟಿಸಲು ಬಯಸಿರುವವರು ಅವರೇ ಹೊರತು ನಾವಲ್ಲ ಎಂದು ಅವರಿಗೆ ಹೇಳಿ. ನಾವು ಭಾರತದೊಂದಿಗೆ ಇರುವುದಕ್ಕಾಗಿ ಗುಂಡೇಟುಗಳನ್ನು ಎದುರಿಸಿದ್ದೇವೆ; ಅಗತ್ಯವಾದರೆ ಮತ್ತೊಮ್ಮೆ ಅವುಗಳನ್ನು ಎದುರಿಸಲು ಸಿದ್ಧರಿದ್ದೇವೆ,’ ಎಂದರು.

ಜಮ್ಮು–ಕಾಶ್ಮೀರದ ಹೊಸ ವಿಭಜನೆಯ ಬೇಡಿಕೆಗಳನ್ನು ತಿರಸ್ಕರಿಸಿದ ಅವರು, ಇಂತಹ ಸಲಹೆಗಳು ಮೂರ್ಖತನ ಮತ್ತು ಅಜ್ಞಾನದಿಂದ ಕೂಡಿವೆ ಎಂದು ಬಣ್ಣಿಸಿದರು. ಲಡಾಖ್‌ನ ಪ್ರತ್ಯೇಕತೆಯನ್ನು ತನ್ನ ಪಕ್ಷವು ಎಂದಿಗೂ ಬೆಂಬಲಿಸಿರಲಿಲ್ಲ ಎಂದು ಹೇಳಿದ ಅಬ್ದುಲ್ಲಾ, 2019ರಲ್ಲಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ಅಂತಿಮವಾಗಿ ಜಮ್ಮು–ಕಾಶ್ಮೀರದೊಂದಿಗೆ ಮತ್ತೆ ಒಂದಾಗುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕೇಂದ್ರಾಡಳಿತ ಪ್ರದೇಶ ಜಮ್ಮು–ಕಾಶ್ಮೀರದಲ್ಲಿ ಹೆಚ್ಚುವರಿ ಜಿಲ್ಲೆಗಳ ರಚನೆಯನ್ನು ತಳ್ಳಿಹಾಕಿದ ಅವರು, ಪೀರ್ ಪಾಂಜಾಲ್ ಮತ್ತು ಚೆನಾಬ್ ಕಣಿವೆಗಳಿಗೆ ಪ್ರತ್ಯೇಕ ವಿಭಾಗಗಳ ಬೇಡಿಕೆಗಳನ್ನು ವಿರೋಧಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News