×
Ad

MDMA ಮಾದಕವಸ್ತು ಜಾಲ: ‘The Family Man’, ‘Farzi’ ವೆಬ್‌ಸಿರೀಸ್ ಪೋಷಕ ನಟ Man Singh ಬಂಧನ

Update: 2025-12-15 16:43 IST

Photo| indianexpress

ಆಗ್ರಾ: MDMA ಮಾದಕವಸ್ತು ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದಂತೆ, ‘The Family Man’ ಹಾಗೂ ‘Farzi’ ಸೇರಿದಂತೆ ಜನಪ್ರಿಯ ವೆಬ್ ಸರಣಿಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದ ಪೋಷಕ ನಟ ಮಾನ್ ಸಿಂಗ್ ನನ್ನು ಉತ್ತರ ಪ್ರದೇಶ ಮಾದಕವಸ್ತು ವಿರೋಧಿ ಕಾರ್ಯಪಡೆ (UP ANTF) ಬಂಧಿಸಿದೆ.

ಬಂಧಿತ Man Singh, NDPS Act ಅಡಿಯಲ್ಲಿ ಆಗ್ರಾದ ನ್ಯೂ ಆಗ್ರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ UP ANTF–ಆಗ್ರಾ ಘಟಕದ ತಂಡವು ಮುಂಬೈನಲ್ಲಿ ಆತನನ್ನು ಪತ್ತೆಹಚ್ಚಿ ಡಿಸೆಂಬರ್ 11ರಂದು ಬಂಧಿಸಿ ಆಗ್ರಾಕ್ಕೆ ಕರೆತಂದಿದೆ.

ವಿಚಾರಣೆ ವೇಳೆ, ತಾನು ಮೂಲತಃ ದಿಲ್ಲಿಯ ರಾಜೌರಿ ಗಾರ್ಡನ್ ನಿವಾಸಿ ಎಂದು ಮಾನ್ ಸಿಂಗ್ ಹೇಳಿಕೆ ನೀಡಿದ್ದಾನೆ. 2008ರಲ್ಲಿ ಚಲನಚಿತ್ರೋದ್ಯಮದಲ್ಲಿ ಅವಕಾಶಗಳಿಗಾಗಿ ಮುಂಬೈಗೆ ತೆರಳಿದ್ದ ಆತ, ಈ ಅವಧಿಯಲ್ಲಿ ಹಲವು ಚಿತ್ರಗಳು ಹಾಗೂ web seriesಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮುಂಬೈನಲ್ಲಿ ಇರುವಾಗ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ ಮಾನ್ ಸಿಂಗ್, ತನ್ನ ಸಹಚರರೊಂದಿಗೆ ಸೇರಿ ಆಗ್ರಾದಲ್ಲಿ ಇನ್ನೊಬ್ಬ ವ್ಯಕ್ತಿಗೆ ಹಲವು ಬಾರಿ MDMA ಪೂರೈಸಿದ್ದಾನೆ ಎಂಬ ಆರೋಪವಿದೆ.

ವಾಂಟೆಡ್ ಆರೋಪಿಗಳನ್ನು ಬಂಧಿಸುವ ನಿರಂತರ ಕಾರ್ಯಾಚರಣೆಯ ಭಾಗವಾಗಿ ಈ ಬಂಧನ ನಡೆದಿದೆ. ಮಾನ್ ಸಿಂಗ್ ವಿರುದ್ಧ NDPS Actನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News