×
Ad

ಕಾಂಗ್ರೆಸ್‌ನ ‘ವೋಟ್ ಚೋರಿ’ ರ್‍ಯಾಲಿಗೆ ಮುನ್ನ ವಿವಾದಾತ್ಮಕ ಘೋಷಣೆಗಳನ್ನು ಟೀಕಿಸಿದ ಬಿಜೆಪಿ

Update: 2025-12-14 23:17 IST

Photo Credit : NDTV 

ಹೊಸದಿಲ್ಲಿ,ಡಿ.14: ದಿಲ್ಲಿಯಲ್ಲಿ ಇಂದು ಮತಕಳ್ಳತನ ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಕಾಂಗ್ರೆಸ್‌ ನ ಬೃಹತ್ ರ್ಯಾಲಿಯ ಸ್ಥಳದಲ್ಲಿ ಅದರ ಕೆಲವು ಕಾರ್ಯಕರ್ತರು ವಿವಾದಾತ್ಮಕ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದ ಬಳಿಕ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದು ಕಾಂಗ್ರೆಸ್‌ ನ ನಿಜವಾದ ಉದ್ದೇಶವಾಗಿದೆ ಎಂದು ಆರೋಪಿಸಿದೆ.

ಸುದ್ದಿಸಂಸ್ಥೆಯು ಹಂಚಿಕೊಂಡಿರುವ ದೃಶ್ಯಗಳು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ಮತ್ತು ಅವರ ಆಡಳಿತವು ಅಂತ್ಯಗೊಳ್ಳಲಿದೆ ಎಂದು ಅಬ್ಬರಿಸುತ್ತಿರುವುದನ್ನು ತೋರಿಸಿವೆ.

‘ಹೀಗಾಗಿ ಕಾಂಗ್ರೆಸ್‌ನ ಅಜೆಂಡಾ ಸ್ಪಷ್ಟವಾಗಿದೆ. ಅದು ಎಸ್‌ಐಆರ್ ಕುರಿತು ಅಲ್ಲ. ಅದು ಎಸ್‌ಐಆರ್ ಹೆಸರಿನಲ್ಲಿ ಸಂವಿಧಾನದ ವಿರುದ್ಧ ಯುದ್ಧದ ಕುರಿತಾಗಿದೆ. ಎಸ್‌ಐಆರ್ ಹೆಸರಿನಲ್ಲಿ ಮೋದಿಯವರನ್ನು ಮುಗಿಸಲು ಅವರು ಬಯಸುತ್ತಿದ್ದಾರೆಯೇ? ಇತ್ತೀಚಿಗೆ ರಾಹುಲ್ ಗಾಂಧಿಯವರು ಚುನಾವಣಾ ಆಯೋಗಕ್ಕೂ ಬೆದರಿಕೆ ಹಾಕಿದ್ದಾರೆ. ಈವರೆಗೆ ಕಾಂಗ್ರೆಸ್ ಪ್ರಧಾನಿಯವರನ್ನು 150ಕ್ಕೂ ಹೆಚ್ಚು ಸಲ ನಿಂದಿಸಿದೆ’ ಎಂದು ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ ಎಕ್ಸ್ ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು,‘‘ಜನರು ತಮ್ಮ ‘ನೆಚ್ಚಿನ ನಾಯಕ’ನಿಗೆ ಈ ಅಗೌರವವನ್ನು ‘ಸಹಿಸುವುದಿಲ್ಲ’. ನಾನು ಈ ಘೋಷಣೆಯನ್ನು ಖುದ್ದಾಗಿ ಆಲಿಸಿಲ್ಲ,ಆದರೆ ನಾನು ಅದನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತೇನೆ. ಇಂತಹ ಘೋಷಣೆಗಳನ್ನು ನಿಜಕ್ಕೂ ಕೂಗಿದ್ದರೆ ಅದು ಸಾರ್ವಜನಿಕ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಈಗಲೂ ವಿಫಲಗೊಂಡಿದೆ ಎನ್ನುವುದನ್ನು ತೋರಿಸುತ್ತದೆ. ಅವರು ಪ್ರಧಾನಿ ಮೋದಿ ಅಥವಾ ಅವರ ಕುಟುಂಬದ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದಾಗೆಲ್ಲ ಜನರು ಅವರನ್ನು ತಿರಸ್ಕರಿಸಿದ್ದಾರೆ ’’ ಎಂದು ಹೇಳಿದರು.

ಬಿಜೆಪಿಯ ಆರೋಪಗಳನ್ನು ತಳ್ಳಿ ಹಾಕಿದ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಅವರು, ಅವುಗಳನ್ನು ‘ಸುಳ್ಳು ಸುದ್ದಿ’ ಎಂದು ಬಣ್ಣಿಸಿದರು.

ಮತ ವಂಚನೆ ಆರೋಪದ ಕುರಿತು ಸಂಸತ್ತು ಚರ್ಚಿಸಿದ ಬಳಿಕ ಕಾಂಗ್ರೆಸ್ ಈ ರ್ಯಾಲಿಯನ್ನು ನಡೆಸಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ ಪಾತ್ರಾ,ಸದನದಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಮತ್ತು ಕೇಂದ್ರ ಗೃಹಸಚಿವರೂ ಅವರಿಗೆ ಉತ್ತರಿಸಿದ್ದರು. ಅವರು ಇಡೀ ಕಥೆಯನ್ನು ಕಟ್ಟಿದ್ದರು ಮತ್ತು ಗೃಹಸಚಿವರು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿದ್ದರು. ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಅವರು ಗೆದ್ದಾಗ ಮತ ಕಳ್ಳತನ ನಡೆದಿರಲಿಲ್ಲ,ಆದರೆ ಬಿಜೆಪಿ ಗೆದ್ದಾಗ ಮತ ಕಳ್ಳತನ ನಡೆದಿದೆ. ಗೃಹಸಚಿವರು ನುಸುಳುಕೋರರ ಬಗ್ಗೆ ಪ್ರಸ್ತಾವಿಸಿದಾಗ ಅವರು ಸಭಾತ್ಯಾಗ ಮಾಡಿದ್ದರು.ಎಸ್‌ಐಆರ್ ವಿರುದ್ಧ ರ್ಯಾಲಿಯು ನುಸುಳುಕೋರರನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದ ಪ್ರಯತ್ನವಾಗಿದೆ ಎನ್ನುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News