ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ಸಚಿವ ನಿತಿನ್ ನಬೀನ್ ಅಚ್ಚರಿಯ ಆಯ್ಕೆ
ಹೊಸದಿಲ್ಲಿ: ಬಿಹಾರ ಸಂಪುಟದಲ್ಲಿ ಸಚಿವರಾಗಿರುವ 45 ವರ್ಷ ವಯಸ್ಸಿನ ನಿತಿನ್ ನಬೀನ್ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷದ ನಾಯಕತ್ವ ಸ್ಥಾನದಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ನಬೀನ್ ಪಾತ್ರರಾಗಿದ್ದಾರೆ.
ರವಿವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ನಿತಿನ್ ನಬೀನ್ ರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ.
ಪಕ್ಷದಲ್ಲಿ ಹಲವು ಮಂದಿ ಹಿರಿಯ ಅನುಭವಿ ನಾಯಕರಿದ್ದರೂ, ಐದು ಬಾರಿಯ ಶಾಸಕನಿಗೆ ಪಕ್ಷದ ನಾಯಕತ್ವ ಮಣೆ ಹಾಕಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಪಕ್ಷಾಧ್ಯಕ್ಷ ಹುದ್ದೆಯ ಪ್ರಕ್ರಿಯೆ ಆರಂಭವಾದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸ್ಥಾನಕ್ಕೆ ನಬೀನ್ ಅವರನ್ನು ಆಯ್ಕೆ ಮಾಡುವ ಮುನ್ಸೂಚನೆ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಲವು ಮಂದಿ ಮುಖಂಡರು ನಬೀನ್ ಅವರನ್ನು ಶ್ಲಾಘಿಸಿದ್ದಾರೆ.
ಅತ್ಯಂತ ಮಹತ್ವದ ಆಡಳಿತ ಮತ್ತು ರಾಜಕೀಯ ವಿಚಾರಗಳನ್ನು ನಿಭಾಯಿಸುವ ಚಾಕಚಕ್ಯತೆಗೆ ಹೆಸರಾಗಿರುವ ನಬೀನ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಬಳಿಕ ಪಕ್ಷದ ಸಂಘಟನೆಯ ಚುಕ್ಕಾಣಿ ಹಿಡಿಯುವ ಎರಡನೇ ಪೀಳಿಗೆಯ ಮುಖಂಡ ಎಂದು ಬಿಂಬಿತರಾಗಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ 2014ರಲ್ಲಿ ಅಮಿತ್ ಶಾ ಹಾಗೂ 2020ರಲ್ಲಿ ಜೆ.ಪಿ.ನಡ್ಡಾ ಅವರ ಹೆಗಲಿಗೆ ಪಕ್ಷದ ಸಂಘಟನಾತ್ಮಕ ಹೊಣೆ ವಹಿಸಲಾಗಿತ್ತು.
"ಸಮರ್ಪಿತ ಕಾರ್ಯಕರ್ತರಾಗಿ ನಿತಿನ್ ನಬೀನ್ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಯುವ ಹಾಗೂ ಕಠಿಣ ಪರಿಶ್ರಮದ ಮುಖಂಡರಾಗಿರುವ ಅವರು ಗಣನೀಯ ಸಂಘಟನಾತ್ಮಕ ಅನುಭವ ಹೊಂದಿದ್ದಾರೆ. ಶಾಸಕ ಹಾಗೂ ಸಚಿವರಾಗಿ ಬಿಹಾರದಲ್ಲಿ ಅವರ ಕಾರ್ಯಗಳು ಪರಿಣಾಮಕಾರಿ ಹಾಗೂ ಜನತೆಯ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಪೂರ್ಣ ಬದ್ಧತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ವಿನೀತ ಸ್ವಭಾವ ಮತ್ತು ತಳಮಟ್ಟದ ಕಾರ್ಯಕ್ಕೆ ಅವರು ಹೆಸರುವಾಸಿ" ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ.