Haryana | IPS ಅಧಿಕಾರಿ Y Puran Kumar ಮೃತ್ಯು ಪ್ರಕರಣ: DGP ಹುದ್ದೆಯಿಂದ Shatrujeet Kapur ಬಿಡುಗಡೆ
credit: telegraphindia
ಚಂಡೀಗಢ: ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಸಾವಿಗೆ ಸಂಬಂಧಿಸಿದ ವಿವಾದದ ನಡುವೆಯೇ, ಹರಿಯಾಣ ಸರ್ಕಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶತ್ರುಜೀತ್ ಕಪೂರ್ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಿದೆ.
ಪೂರಣ್ ಕುಮಾರ್ ಸಾವಿನ ಕುರಿತು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಅಕ್ಟೋಬರ್ 14ರಂದು ಕಪೂರ್ ಅವರನ್ನು ರಜೆಗೆ ಕಳುಹಿಸಲಾಗಿತ್ತು. ಅವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಓ.ಪಿ. ಸಿಂಗ್ ಅವರಿಗೆ ಡಿಜಿಪಿಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಸರ್ಕಾರದ ಆದೇಶದಂತೆ, ಮುಂದಿನ ಸೂಚನೆಗಳವರೆಗೆ ಓ.ಪಿ. ಸಿಂಗ್ ಅವರನ್ನು ಅಧಿಕೃತ ಡಿಜಿಪಿಯಾಗಿ ನೇಮಿಸಲಾಗಿದೆ.
1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಓ.ಪಿ. ಸಿಂಗ್ ಡಿಸೆಂಬರ್ 31ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ, ಹೊಸ ರಾಜ್ಯ ಪೊಲೀಸ್ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿ ಹರಿಯಾಣ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿಗಳ ಪಟ್ಟಿ ಕೇಂದ್ರ ಸಾರ್ವಜನಿಕ ಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಕಳುಹಿಸುವ ಸಾಧ್ಯತೆ ಇದೆ.
1990ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಶತ್ರುಜೀತ್ ಕಪೂರ್ ಅವರನ್ನು ಅಧಿಕೃತ ಆದೇಶದಂತೆ ಪಂಚಕುಲದಲ್ಲಿರುವ ಹರಿಯಾಣ ಪೊಲೀಸ್ ವಸತಿ ನಿಗಮದ ಅಧ್ಯಕ್ಷರಾಗಿ ನೇಮಿಸಲಾಗಿದೆ. ಇಂಜಿನಿಯರಿಂಗ್ ಪದವೀಧರರಾದ ಕಪೂರ್ ಅವರು ಆಗಸ್ಟ್ 2023ರಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.
2001ರ ಬ್ಯಾಚ್ ನ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ (52) ಅಕ್ಟೋಬರ್ 7ರಂದು ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ರಾಜ್ಯದ ಆಡಳಿತ ಹಾಗೂ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.