×
Ad

ಡಾಲರ್ ನೆದುರು ಮತ್ತೆ ದಾಖಲೆಯ 90.58ಕ್ಕೆ ಕುಸಿದ ರೂಪಾಯಿ ಮೌಲ್ಯ

Update: 2025-12-15 11:46 IST

Photo Credit: Getty Images/iStockphoto

ಹೊಸದಿಲ್ಲಿ: ಸೋಮವಾರ ಡಿ.15ರಂದು ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮತ್ತೊಮ್ಮೆ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಮುಂದುವರಿದಿರುವ ಅನಿಶ್ಚಿತತೆ ಹಾಗೂ ವಿದೇಶಿ ಹೂಡಿಕೆದಾರರಿಂದ ನಿರಂತರ ನಿಧಿ ಹೊರಹರಿವು ರೂಪಾಯಿಯ ಮೇಲೆ ಒತ್ತಡ ತಂದಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಡಾಲರ್ ಎದುರು 90.53ಕ್ಕೆ ವಹಿವಾಟು ಆರಂಭಿಸಿ, ಕೆಲವೇ ಹೊತ್ತಿನಲ್ಲಿ 9 ಪೈಸೆ ಕುಸಿದು 90.58ಕ್ಕೆ ತಲುಪಿತು. ಇದು ರೂಪಾಯಿಯ ಇತಿಹಾಸದಲ್ಲೇ ಕನಿಷ್ಠ ಮಟ್ಟವಾಗಿದೆ. ಶುಕ್ರವಾರ (ಡಿ.12) ರೂಪಾಯಿ 17 ಪೈಸೆ ಕುಸಿದು 90.49ಕ್ಕೆ ಮುಕ್ತಾಯವಾಗಿತ್ತು.

ಹೂಡಿಕೆದಾರರು ಎಚ್ಚರಿಕೆಯ ನಿಲುವು ತಳೆದಿದ್ದು, ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಸ್ಪಷ್ಟ ಸೂಚನೆಗಳ ನಿರೀಕ್ಷೆಯಲ್ಲಿ ರೂಪಾಯಿ ನಕಾರಾತ್ಮಕ ಧೋರಣೆಯಲ್ಲೇ ವಹಿವಾಟು ನಡೆಸುತ್ತಿದೆ ಎಂದು ಫಾರೆಕ್ಸ್ ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಆರು ಪ್ರಮುಖ ಕರೆನ್ಸಿಗಳ ಎದುರು ಡಾಲರ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕ ಶೇ.0.05 ಇಳಿಕೆಯಾಗಿದ್ದು, 98.35ಕ್ಕೆ ವಹಿವಾಟು ನಡೆಸಿತು. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.0.52 ಏರಿಕೆಯಾಗಿ ಬ್ಯಾರೆಲ್‌ ಗೆ 61.44 ಡಾಲರ್‌ ಗೆ ತಲುಪಿದೆ.

ದೇಶೀಯ ಷೇರು ಮಾರುಕಟ್ಟೆಯಲ್ಲಿಯೂ ದುರ್ಬಲ ವಾತಾವರಣ ಕಂಡುಬಂದಿದೆ. 30 ಷೇರುಗಳ ಮಾನದಂಡ ಸೂಚ್ಯಂಕ ಸೆನ್ಸೆಕ್ಸ್ 298.86 ಪಾಯಿಂಟ್‌ಗಳ ಇಳಿಕೆಯಾಗಿ 84,968.80ಕ್ಕೆ ಕುಸಿದರೆ, 50 ಷೇರುಗಳ ಮಾನದಂಡ ಸೂಚ್ಯಂಕ ನಿಫ್ಟಿ 121.40 ಪಾಯಿಂಟ್‌ಗಳ ಕುಸಿತದೊಂದಿಗೆ 25,925.55ಕ್ಕೆ ತಲುಪಿದೆ.

ವಿನಿಮಯ ದತ್ತಾಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 1,114.22 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

“ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು ಷೇರು ಹಾಗೂ ಸಾಲ ಮಾರುಕಟ್ಟೆಗಳಲ್ಲಿ ಮಾರಾಟ ಮುಂದುವರಿಸಿದ್ದಾರೆ. ಆದರೆ ದೀರ್ಘಾವಧಿಯ ಸ್ಥಿತಿಗತಿಗಳಿಗೆ ಹಣಕಾಸು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಡಾಲರ್ ಮಾರಾಟ ಮಾಡುತ್ತಿದೆ,” ಎಂದು ಫಿನ್‌ರೆಕ್ಸ್ ಟ್ರೆಷರಿ ಅಡ್ವೈಸರ್ಸ್ ಎಲ್‌ಎಲ್‌ಪಿ ಖಜಾನೆ ಮುಖ್ಯಸ್ಥ ಅನಿಲ್ ಕುಮಾರ್ ಬನ್ಸಾಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News