ಫೆಬ್ರವರಿ 1ರಿಂದ ಸಿಗರೇಟ್, ಬೀಡಿ, ಪಾನ್ ಮಸಾಲಾ ಮೇಲೆ ಹೆಚ್ಚುವರಿ ಸುಂಕ: ಕೇಂದ್ರ ಸರಕಾರದಿಂದ ಅಧಿಸೂಚನೆ
ಹೊಸದಿಲ್ಲಿ: ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾದ ಮೇಲೆ ಹೊಸ ಸೆಸ್ ಅನ್ನು ವಿಧಿಸಲಾಗುವುದು ಎಂದು ಸರಕಾರ ಅಧಿಸೂಚನೆ ಹೊರಡಿಸಿದೆ.
ತಂಬಾಕು ಮತ್ತು ಪಾನ್ ಮಸಾಲಾದ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚುವರಿಯಾಗಿ ಇರುತ್ತವೆ. ಫೆಬ್ರವರಿ 1ರಿಂದ ಪಾನ್ ಮಸಾಲಾ, ಸಿಗರೇಟ್‌ಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ಶೇಕಡಾ 40ರಷ್ಟು ಜಿಎಸ್‌ಟಿ ದರವನ್ನು ವಿಧಿಸಲಾಗುವುದು. ಬೀಡಿಗಳಿಗೆ ಶೇಕಡಾ 18ರಷ್ಟು ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ ಎಂದು ಸರಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಇದರ ಜೊತೆಗೆ, ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುತ್ತದೆ. ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುತ್ತದೆ.
ಡಿಸೆಂಬರ್‌ನಲ್ಲಿ ಸಂಸತ್ತು ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮತ್ತು ತಂಬಾಕಿನ ಮೇಲೆ ಅಬಕಾರಿ ಸುಂಕ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಅಂಗೀಕರಿಸಿತ್ತು.
ಈ ತೆರಿಗೆಗಳು ಫೆಬ್ರವರಿ 1ರಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಸರಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.