×
Ad

Madhya Pradesh| ಪ್ರಶ್ನೆ ಕೇಳಿದ NDTV ಪತ್ರಕರ್ತನಿಗೆ ಆಕ್ಷೇಪಾರ್ಹ ಪದ ಬಳಸಿದ ಬಿಜೆಪಿ ಸಚಿವ ಕೈಲಾಶ್ ವಿಜಯವರ್ಗಿಯ!

'ಸ್ವಚ್ಛ ನಗರ' ಇಂದೋರ್‌ ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ 10 ಮಂದಿ ಮೃತಪಟ್ಟ ಪ್ರಕರಣ

Update: 2026-01-01 11:46 IST

Photo| NDTV

ಇಂದೋರ್: ದೇಶದ ಅತ್ಯಂತ ಸ್ವಚ್ಛ ನಗರವೆಂದು ಸತತವಾಗಿ ಗುರುತಿಸಿಕೊಂಡಿರುವ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಉಂಟಾದ ಅತಿಸಾರದಿಂದ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 212 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮಧ್ಯಪ್ರದೇಶದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಕೈಲಾಶ್ ವಿಜಯವರ್ಗಿಯ ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ಅನಗತ್ಯ ಪ್ರಶ್ನೆಗಳನ್ನು ಕೇಳಬೇಡಿ” ಎಂದು ಪ್ರತಿಕ್ರಿಯಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ.

ಬುಧವಾರ ರಾತ್ರಿ ಇಂದೋರ್‌ ನ ಭಾಗೀರಥಪುರ ಪ್ರದೇಶದಲ್ಲಿ ನಡೆದ ಕಲುಷಿತ ಕುಡಿಯುವ ನೀರಿನ ಪ್ರಕರಣದ ಕುರಿತು NDTV ವರದಿಗಾರರು ಪ್ರಶ್ನಿಸಿದಾಗ, ಸಚಿವ ವಿಜಯವರ್ಗಿಯ ಅವರು ತಾಳ್ಮೆ ಕಳೆದುಕೊಂಡು ಸಭ್ಯತೆಯ ಮಿತಿಯನ್ನು ಮೀರಿ ಕ್ಯಾಮೆರಾಗಳ ಮುಂದೆ ಆಕ್ಷೇಪಾರ್ಹ ಪದಗಳನ್ನು ಬಳಸಿದರು. ಈ ವೇಳೆ ಸಚಿವರು ಮತ್ತು ವರದಿಗಾರರ ನಡುವೆ ವಾಗ್ವಾದವೂ ನಡೆಯಿತು. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಭಾಗೀರಥಪುರ ಪ್ರದೇಶವು ವಿಜಯವರ್ಗಿಯ ಅವರ ವಿಧಾನಸಭಾ ಕ್ಷೇತ್ರವಾದ ಇಂದೋರ್–1 ವ್ಯಾಪ್ತಿಗೆ ಸೇರಿದೆ. ಇಲ್ಲಿ ಕಲುಷಿತ ನೀರು ಕುಡಿದು ಉಂಟಾದ ಅತಿಸಾರದಿಂದ ಇದುವರೆಗೆ 10 ಮಂದಿ ಮೃತಪಟ್ಟಿದ್ದಾರೆ. 212 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 50 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ ಸಾವಿನ ಸಂಖ್ಯೆಯಲ್ಲಿ ಗೊಂದಲವಿದ್ದರೂ, ನಂತರ ಆಡಳಿತವು 10 ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ.

ಪ್ರಕರಣದ ಕುರಿತ ಸುದ್ದಿಗಾರರ ಪ್ರಶ್ನೆಗೆ ಆರಂಭದಲ್ಲಿ ಸಚಿವ ವಿಜಯವರ್ಗಿಯ ಅವರು ಕೆಲವು ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿದರು. ಆದರೆ ಭಾಗೀರಥಪುರದ ಹಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ದೊಡ್ಡ ಮೊತ್ತದ ಹಣ ಪಾವತಿಸಬೇಕಾಗಿರುವುದು, ವೈದ್ಯಕೀಯ ವೆಚ್ಚಗಳ ಮರುಪಾವತಿ ಇನ್ನೂ ಸಿಕ್ಕಿಲ್ಲ ಎಂಬ ವಿಚಾರ ಹಾಗೂ ಪ್ರದೇಶದ ನಿವಾಸಿಗಳಿಗೆ ಸಮರ್ಪಕ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬ ಪ್ರಶ್ನೆಗಳು ಕೇಳಿಬಂದಾಗ, ಅವರು ಆಕ್ರೋಶಗೊಂಡರು.  

ನಗರಾಭಿವೃದ್ಧಿ ಸಚಿವ ಹಾಗೂ ಸ್ಥಳೀಯ ಶಾಸಕರಾಗಿರುವ ಕೈಲಾಶ್ ವಿಜಯವರ್ಗಿಯ ಅವರು ಈ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕ್ರಮ ಏಕೆ ಕೈಗೊಳ್ಳಲಾಗುತ್ತಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲೇ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವೇಳೆ ಸಚಿವರೊಂದಿಗೆ ವಾಗ್ವಾದ ನಡೆಸಿದ ಪತ್ರಕರ್ತ ಅನುರಾಗ್ ದ್ವಾರಿ, “ದೇಶದ ಅತ್ಯಂತ ಸ್ವಚ್ಛ ನಗರವೆಂದು ಹೇಳಲಾಗುವ ಸ್ಥಳದಲ್ಲೇ ಕಲುಷಿತ ನೀರು ಕುಡಿದು ಜನರ ಪ್ರಾಣ ಹಾನಿಯಾಗುತ್ತಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪ್ರಶ್ನೆಗಳನ್ನು ನಿರ್ಲಕ್ಷ್ಯಿಸುವುದು ಗಂಭೀರ ವಿಷಯ” ಎಂದು ಹೇಳಿದ್ದಾರೆ.

ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಪತ್ರಕರ್ತ ಮುಹಮ್ಮದ್ ಝುಬೈರ್, "ಅಮಿತ್ ಶಾ ಅವರಿಗೆ ಸಮೀಪದ, ಕೈಲಾಶ್ ವಿಜಯವರ್ಗಿಯವರಂತಹ ಶಕ್ತಿಶಾಲಿ ವ್ಯಕ್ತಿಗೆ ಪ್ರಶ್ನೆ ಕೇಳಿ ತಿರುಗೇಟು ನೀಡುವ ಧೈರ್ಯವನ್ನು ಭಾರತೀಯ ಪತ್ರಕರ್ತರಿಂದ ನಿರೀಕ್ಷಿಸುವುದು ಕಷ್ಟ. ಆದರೆ ಈ ವೀಡಿಯೊದಲ್ಲಿ ಕಂಡ ಪತ್ರಿಕೋದ್ಯಮ, ಅಧಿಕಾರವನ್ನು ಹೊಣೆಗಾರರನ್ನಾಗಿ ಮಾಡುವ ಭರವಸೆಯನ್ನು ಜೀವಂತಗೊಳಿಸುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಘಟನೆಯ ವೀಡಿಯೊ ವೈರಲ್ ಆದ ಬಳಿಕ ರಾಜಕೀಯ ವಲಯದಲ್ಲಿ ವಿವಾದ ತೀವ್ರಗೊಂಡಿದೆ. ನಂತರ ಸಚಿವ ವಿಜಯವರ್ಗಿಯ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದರು. ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು, “ಕಳೆದ ಎರಡು ದಿನಗಳಿಂದ ನಾನು ಮತ್ತು ನನ್ನ ತಂಡ ನೀರು ಕಲುಷಿತಗೊಂಡಿರುವ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಣೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನನ್ನ ಜನರು ಕಲುಷಿತ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ; ಕೆಲವರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇಂತಹ ದುಃಖದ ಸಂದರ್ಭದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸುವಾಗ ನನ್ನ ಮಾತುಗಳು ತಪ್ಪಾಗಿ ಹೊರಬಂದಿವೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯ ಬಳಿಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು ವಿಜಯವರ್ಗಿಯ ಅವರ ವಿವಾದಾತ್ಮಕ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇಂದೋರ್‌ನಲ್ಲಿ ವಿಷಕಾರಿ ನೀರು ಕುಡಿದು ಕನಿಷ್ಠ 10 ಮಂದಿ ಮೃತಪಟ್ಟಿದ್ದರು. ಬಿಜೆಪಿ ನಾಯಕರ ಅಹಂಕಾರ ಮತ್ತು ಅಸಂವೇದನೆ ಕಡಿಮೆಯಾಗಿಲ್ಲ. ಜವಾಬ್ದಾರಿ ಕುರಿತು ಪ್ರಶ್ನಿಸಿದಾಗ ಸಚಿವರು ಪತ್ರಕರ್ತರ ಮೇಲೆ ನಿಂದನೀಯ ಭಾಷೆ ಬಳಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ನೈತಿಕ ಹೊಣೆ ಹೊತ್ತು ಸಚಿವ ವಿಜಯವರ್ಗಿಯ ಅವರ ರಾಜೀನಾಮೆಯನ್ನು ತಕ್ಷಣ ಪಡೆಯಬೇಕೆಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಪಟ್ವಾರಿ ಆಗ್ರಹಿಸಿದ್ದಾರೆ.

ಈ ನಡುವೆ ಭಾಗೀರಥಪುರದ ನಿವಾಸಿಗಳು ಇನ್ನೂ ಆತಂಕದ ನಡುವೆಯೇ ಬದುಕುತ್ತಿದ್ದಾರೆ. ಕಲುಷಿತ ನೀರು ಸೇವಿಸಿ ಮೃತಪಟ್ಟ 70 ವರ್ಷದ ನಂದಲಾಲ್ ಪಾಲ್ ಅವರ ಪುತ್ರ, “ನಮ್ಮ ಸಂಸ್ಕೃತಿಯಲ್ಲಿ ಯಾರಾದರೂ ಸತ್ತರೆ ಜನರು ಮನೆಗೆ ಬಂದು ಸಂತಾಪ ಸೂಚಿಸುತ್ತಾರೆ. ಆದರೆ ನಮ್ಮನ್ನು ಶಾಸಕರನ್ನು ಭೇಟಿ ಮಾಡಲು ಹೋಗುವಂತೆ ಹೇಳಿದರು. ಮೂರು ದಿನಗಳ ಕಾಲ ನಾನು ಮನೆಯಿಂದ ಹೊರಗೆ ಹೋಗಲಿಲ್ಲ” ಎಂದು ತಿಳಿಸಿದ್ದಾರೆ.

2021ರಲ್ಲಿ ಇಂದೋರ್‌ಗೆ ‘ವಾಟರ್ ಪ್ಲಸ್ ನಗರ’ ಎಂಬ ಮಾನ್ಯತೆ ದೊರೆತಿತ್ತು. ತ್ಯಾಜ್ಯ ನೀರಿನ ಸಮರ್ಪಕ ನಿರ್ವಹಣೆ, ಸಂಸ್ಕರಿಸದ ಕೊಳಚೆ ನೀರು ನದಿಗಳಿಗೆ ಸೇರುವುದನ್ನು ತಡೆಯುವ ಕ್ರಮಗಳು ಮತ್ತು ಸಂಸ್ಕರಿಸಿದ ನೀರಿನ ಮರುಬಳಕೆಗೆ ಈ ನಗರ ಗುರುತಿಸಿಕೊಂಡಿತ್ತು. ಸತತ ಏಳು ಬಾರಿ ದೇಶದ ಅತ್ಯಂತ ಸ್ವಚ್ಛ ನಗರವೆಂದು ಗುರುತಿಸಿಕೊಂಡಿದ್ದ ಇಂದೋರ್ ಈಗ ಕಲುಷಿತ ಕುಡಿಯುವ ನೀರಿನಿಂದ ಉಂಟಾದ ಪ್ರಾಣಹಾನಿಗೆ ಸಂಬಂಧಿಸಿ ಸುದ್ದಿಯಲ್ಲಿದೆ.

ಮುಖ್ಯಮಂತ್ರಿ ಮೋಹನ್ ಯಾದವ್ ಇಂದೋರ್‌ಗೆ ಭೇಟಿ ನೀಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿಯಾದರು ಹಾಗೂ ಪರಿಶೀಲನಾ ಸಭೆ ನಡೆಸಿದರು. ಇಂತಹ ದುರಂತ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ಈ ಕುರಿತು ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News