×
Ad

AGR ಬಾಕಿ ಪಾವತಿ: ವೊಡಾಫೋನ್ ಐಡಿಯಾಗೆ 10 ವರ್ಷಗಳ ಕಾಲಾವಕಾಶ ನೀಡಿದ ಕೇಂದ್ರ ಸರಕಾರ

Update: 2026-01-01 08:27 IST

Vodafone Idea

ಹೊಸದಿಲ್ಲಿ: ಪ್ರಮುಖ ದೂರಸಂಪರ್ಕ ಸೇವಾ ಕಂಪನಿಗಳಲ್ಲೊಂದಾದ ವೊಡಾಫೋನ್ ಐಡಿಯಾ 2025ರ ಡಿಸೆಂಬರ್ 31ಕ್ಕೆ ಸರ್ಕಾರಕ್ಕೆ ಪಾವತಿಸಬೇಕಿರುವ 87,695 ಕೋಟಿ ರೂಪಾಯಿ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್) ಬಾಕಿಯನ್ನು ಐದು ವರ್ಷಗಳ ಬಳಿಕ ಮರುಪಾವತಿ ಮಾಡಲು ಸರ್ಕಾರ ಕಾಲಾವಕಾಶ ನೀಡಿದೆ.

ಕೇಂದ್ರ ಸಚಿವ ಸಂಪುಟ ಬುಧವಾರ ಈ ಸಂಬಂಧ ನಿರ್ಣಯ ಕೈಗೊಂಡಿದ್ದು, ಹೊಸ ವೇಳಾಪಟ್ಟಿ ಅನ್ವಯ 2030-31ರಿಂದ ಮರುಪಾವತಿ ಆರಂಭಿಸಬೇಕಾಗುತ್ತದೆ. ಇದರ ಜತೆಗೆ ಈ ಕಡಿತ ದೃಢೀಕರಣ ಮಾರ್ಗಸೂಚಿ ಅನ್ವಯ ಬಾಕಿ ಮೊತ್ತದ ಮರು ಮೌಲ್ಯಮಾಪನವನ್ನು ದೂರಸಂಪರ್ಕ ಇಲಾಖೆ ಮಾಡಲಿದೆ ಹಾಗೂ ಕೇಂದ್ರ ಸರ್ಕಾರ ನೇಮಕ ಮಾಡಿದ ಸಮಿತಿ ಇದನ್ನು ನಿರ್ಧರಿಸಲಿದ್ದು, ಇದನ್ನು ಎರಡೂ ಕಡೆಯವರು ಒಪ್ಪಿಕೊಳ್ಳಬೇಕಾಗುತ್ತದೆ.

2017-18 ಮತ್ತು 2018-19ರ ಎಜಿಆರ್ ಬಾಕಿಯನ್ನು 2020ರ ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ಅಂತಿಮಪಡಿಸಲಾಗಿದ್ದು, ಇದನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಕಂಪನಿ 2025-26 ಹಾಗೂ 2030-31ರ ಅವಧಿಯಲ್ಲಿ ಪಾವತಿಸಬಹುದಾಗಿದೆ. ಇದೀಗ ಸಂಪುಟ ನಿರ್ಧಾರದಿಂದಾಗಿ ವೊಡಾಫೋನ್‍ಗೆ ಐದು ವರ್ಷಗಳ ಹೆಚ್ಚುವರಿ ಅವಧಿ ಲಭ್ಯವಾಗಲಿದೆ.

ಆದಾಗ್ಯೂ ಷೇರುಪೇಟೆಯಲ್ಲಿ ಈ ಹೊಸ ಪ್ಯಾಕೇಜ್‍ಗೆ ಉತ್ತೇಜನಕಾರಿ ಪ್ರತಿಕ್ರಿಯೆ ಸಿಕ್ಕಿಲ್ಲ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ ಕಂಪನಿಯ ಷೇರುಗಳು 10.8 ರೂಪಾಯಿಯಲ್ಲಿ ಮುಕ್ತಾಯವಾಗಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ಶೇ.11ರಷ್ಟು ಕುಸಿತ ಕಂಡುಬಂದಿದೆ. ಹೊಸ ನಿರ್ಧಾರದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ವೊಡಾಫೋನ್ ಸ್ಪಷ್ಟಪಡಿಸಿದೆ.

ಈ ಮೊದಲು ನೀಡಿದ ಆಶ್ವಾಸನೆಗಳ ಹೊರತಾಗಿಯೂ ವೊಡಾಫೋನ್ ಐಡಿಯಾ ವಾರ್ಷಿಕ 18 ಸಾವಿರ ಕೋಟಿ ರೂಪಾಯಿಗಳನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ ಎಂಬ ಕಾರಣಕ್ಕೆ ನೆರವಿಗಾಗಿ ಸುಪ್ರೀಂಕೋರ್ಟ್‍ನ ಮೊರೆ ಹೋಗಿದೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಕಂಪನಿಗೆ ಕೊಡುಗೆ ನೀಡಲಾಗಿದ್ದು, ಸರ್ಕಾರದ ದೊಡ್ಡ ಪಾಲು ಇರುವ ಹಿನ್ನೆಲೆಯಲ್ಲಿ ಹಾಗೂ 20 ಕೋಟಿ ಮೊಬೈಲ್ ಗ್ರಾಹಕರ ಹಿತಾಸಕ್ತಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News