ಕೊರೆಯುವ ಚಳಿಯಲ್ಲೂ 2026ಕ್ಕೆ ಭವ್ಯ ಸ್ವಾಗತ, ಸಂಭ್ರಮಾಚರಣೆ
PC | PTI
ಹೊಸದಿಲ್ಲಿ: ಇಡೀ ವಿಶ್ವ 2026ನ್ನು ಸಡಗರ- ಸಂಭ್ರಮದಿಂದ ಸ್ವಾಗತಿಸಿದ್ದು, ದಟ್ಟ ಮಂಜು, ಕೊರೆಯುವ ಚಳಿಯ ನಡುವೆಯೂ ಭಾರತದಲ್ಲಿ ಕೂಡಾ ಹೊಸ ವರ್ಷದ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ದೊಡ್ಡನಗರಗಳಲ್ಲಿ ಜನ ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಪಟ್ಟರು. ಮುಂಬೈನ ಮರಿನ್ ಡ್ರೈವ್‍ನಲ್ಲಿ ದೊಡ್ಡ ಸಂಖ್ಯೆಯ ಜನ ಜಮಾಯಿಸಿದರೆ, ದೆಹಲಿಯ ಕನೌತ್ ಪ್ಲೇಸ್‍ನಲ್ಲಿ ಕೊರೆಯುವ ಚಳಿಯ ನಡುವೆಯೂ ಸಾವಿರಾರು ಜನ ಬೀದಿಗಳಲ್ಲಿ ಕಾಣಿಸಿಕೊಂಡರು.
2020 ಬಳಿಕ ಇದೇ ಮೊದಲ ಬಾರಿ ಕೊರೆಯುವ ಚಳಿಯಲ್ಲೂ ಹೊಸ ವರ್ಷವನ್ನು ಸ್ವಾಗತಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿ ವೇಳೆಗೆ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಷಿಯಸ್ ಇತ್ತು. ಪರ್ವತ ಶ್ರೇಣಿಯನ್ನೊಳಗೊಂಡ ಶಿಮ್ಲಾ ಮತ್ತು ಮನಾಲಿ ದಟ್ಟ ಮಂಜಿನ ಹೊರತಾಗಿಯೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.
ಇದೇ ವೇಳೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಜಪಾನ್, ಹಾಂಕಾಂಗ್ ಮತ್ತು ಚೀನಾದಲ್ಲೂ ಸಂಭ್ರಮಾಚರಣೆ ಕಂಡುಬಂತು.
ನ್ಯೂಜಿಲೆಂಡ್ ಹೊಸ ವರ್ಷಕ್ಕೆ ಕಾಲಿಟ್ಟ ಮೊದಲ ದೇಶ. ಆಕ್ಲೆಂಡ್‍ನ ಆಕರ್ಷಕ ಸ್ಕೈಟವರ್ ನಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ನಡೆಯಿತು. 240 ಮೀಟರ್ ಎತ್ತರದ ಟವರ್ ನಿಂದ ಹಲವು ಹಂತಗಳಲ್ಲಿ 3,500 ಸೆಟ್ ಪಟಾಕಿಗಳು ಸಿಡಿದವು. ದೇಶದ ಅತಿ ಎತ್ತರದ ಸ್ಕೈಟವರ್ ಮತ್ತೊಮ್ಮೆ ಸಂಭ್ರಮಾಚರಣೆಯ ಕೇಂದ್ರಬಿಂದು ಎನಿಸಿತು. ಸಾವಿರಾರು ಮಂದಿ ಈ ಸಂಭ್ರಮಕ್ಕೆ ಸಾಕ್ಷಿಯಾದರು.
ಆಸ್ಟ್ರೇಲಿಯಾದ ತಸ್ಮನ್ ಸಮುದ್ರ ಕಿನಾರೆ ಹಾಗೂ ಸಿಡ್ನಿಯಲ್ಲೂ ಆಕರ್ಷಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಸಂಭ್ರಮಾಚರಣೆಗೆ ಮುನ್ನ ಬೊಂಡಿ ಬೀಚ್ ದಾಳಿಯ ಸಂತ್ರಸ್ತರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು. ಸಿಡ್ನಿ ಹಾರ್ಬರ್ ಬ್ರಿಡ್ಜ್ ಏಕತೆಯ ಸಂಕೇತಗಳೊಂದಿಗೆ ಆಕರ್ಷಕ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಜಪಾನ್ ಕೂಡಾ ಸಾಂಪ್ರದಾಯಿಕ ಹೊಸ ವರ್ಷವನ್ನು ಶೊಂಗತ್ಸು ಆಗಿ ಆಚರಿಸಿತು. ಇಲ್ಲಿ ಜನವರಿ 1 ರಿಂದ ಆರಂಭವಾಗುವ ಸಂಭ್ರಮಾಚರಣೆ ಹಲವು ದಿನಗಳ ಕಾಲ ನಡೆಯುತ್ತದೆ.