Madhya Pradesh: ರಾಷ್ಟ್ರೀಯ ಜಲ ಪ್ರಶಸ್ತಿ ಪಡೆಯಲು AI ಚಿತ್ರ ಬಳಕೆ ಆರೋಪ: IAS ಅಧಿಕಾರಿಗಳಿಂದ ನಿರಾಕರಣೆ
Photo: X/@jitupatwari
ಹೊಸದಿಲ್ಲಿ: ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆಯಲು ಕೃತಕ ಬುದ್ಧಿಮತ್ತೆ (AI) ಚಾಲಿತ ಚಿತ್ರಗಳನ್ನು ಬಳಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಧ್ಯಪ್ರದೇಶ ಕೇಡರ್ ನ ಖಾಂಡ್ವಾ ಜಿಲ್ಲಾಧಿಕಾರಿ ರಿಶವ್ ಗುಪ್ತ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ಡಾ. ನಾಗಾರ್ಜುನ್ ಬಿ.ಗೌಡ ಅವರು ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಈ ಕುರಿತು ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪತ್ವಾರಿ, “ಕೃತಕ ಬುದ್ಧಿಮತ್ತೆ(AI) ಯನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಮಕ್ಕಳಿಗೆ ಬೋಧಿಸಬೇಕಾದ ಮಧ್ಯಪ್ರದೇಶ ಬಿಜೆಪಿ ಸರ್ಕಾರ, ತಾನೇ ಭ್ರಷ್ಟಾಚಾರ ನಡೆಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಿದೆ” ಎಂದು ಆರೋಪಿಸಿದ್ದರು.
“ಖಾಂಡ್ವಾದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಿಗಳು ಜಲ ಸಂರಕ್ಷಣೆಯ ಹೆಸರಲ್ಲಿ ಎರಡು ಅಡಿ ಆಳದ ಗುಂಡಿಯನ್ನು ಬಾವಿಯಂತೆ ತೋರಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಿದ್ದು, ಆ ಪ್ರದೇಶದಾದ್ಯಂತ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕೃತಕ ಬುದ್ಧಿಮತ್ತೆ ಚಾಲಿತ ಚಿತ್ರಗಳನ್ನು ತನ್ನ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಕೃತಕ ಬುದ್ಧಿಮತ್ತೆ ಚಿತ್ರಗಳನ್ನೇ ಆಧರಿಸಿ, ಅವರು ಗೌರವಾನ್ವಿತ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ” ಎಂದೂ ಅವರು ಆರೋಪಿಸಿದ್ದರು.
“ವಾಸ್ತವವಾಗಿ ಅಲ್ಲಿ ಖಾಲಿ ಮೈದಾನಗಳು ಹಾಗೂ ಹೊಲಗಳಿದ್ದವು. ಬಿಜೆಪಿಯ ಆಡಳಿತದಲ್ಲಿ ಭ್ರಷ್ಟಾಚಾರವೂ ಚಾಣಾಕ್ಷವಾಗಿದೆ” ಎಂದು ಅವರು ದೂರಿದ್ದಾರೆ.ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಐಎಎಸ್ ಅಧಿಕಾರಿಗಳಿಬ್ಬರೂ, ಇದು ಸುಳ್ಳು ಎಂದು ಪ್ರತಿಪಾದಿಸಿದ್ದಾರೆ.
“ಈ ವಿವಾದ ನಿಜವಾಗಿಯೂ ಆಕಸ್ಮಿಕವಾಗಿದ್ದರೂ, ದುರದೃಷ್ಟಕರವಾಗಿದೆ” ಎಂದು ಖಾಂಡ್ವಾ ಜಿಲ್ಲಾ ಪಂಚಾಯತಿಯ ಸಿಇಒ ಡಾ. ನಾಗಾರ್ಜುನ್ ಬಿ.ಗೌಡ ಸ್ಪಷ್ಟನೆ ನೀಡಿದ್ದಾರೆ.
‘ಜಲ್ ಸಂಚಯ್ ಜನ್ ಭಾಗಿದಾರಿ’ ಉಪಕ್ರಮದಡಿ ಪ್ರಶಸ್ತಿ ಗಳಿಸಲು ಖಾಂಡ್ವಾ ಜಿಲ್ಲಾಡಳಿತವು ಇತರ ಎಲ್ಲ ಸ್ಪರ್ಧಿಗಳಂತೆ ತಾನೂ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಕುರಿತು ದತ್ತಾಂಶ ಹಾಗೂ ಛಾಯಾಚಿತ್ರ ಸಾಕ್ಷ್ಯಗಳನ್ನೊಳಗೊಂಡ ದಾಖಲೆಗಳನ್ನು ಸಲ್ಲಿಸಬೇಕಾಗಿತ್ತು. ಆದರೆ, ಈ ಕುರಿತು ವರದಿ ಮಾಡಿದ್ದ ‘ದೈನಿಕ್ ಭಾಸ್ಕರ್’ ದಿನಪತ್ರಿಕೆ, ಖಾಂಡ್ವಾ ಜಿಲ್ಲಾಡಳಿತ ಸಲ್ಲಿಸಿದ್ದ ಛಾಯಾಚಿತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ವಾಟರ್‌ಮಾರ್ಕ್‌ಗಳಿರುವುದನ್ನು ಎತ್ತಿ ತೋರಿಸಿತ್ತು. ಇದರ ಆಧಾರದಲ್ಲಿ ಆ ಛಾಯಾಚಿತ್ರಗಳು ನಕಲಿಯಾಗಿದ್ದು, ವಂಚನೆ ನಡೆದಿದೆ ಎಂದು ಆರೋಪಿಸಿತ್ತು.
“ತಾಂತ್ರಿಕ ಗೊಂದಲದಿಂದಾಗಿ ಈ ವರದಿ ತಪ್ಪಾಗಿ ಮೂಡಿದೆ. ಈ ಮಾಧ್ಯಮ ಸಂಸ್ಥೆಯು ಮಾಹಿತಿ, ಶಿಕ್ಷಣ ಮತ್ತು ಸಂವಹನಕ್ಕೆ ಮಾತ್ರ ಮೀಸಲಾದ ‘ಕ್ಯಾಚ್ ದಿ ರೈನ್’ ಪೋರ್ಟಲ್‌ನಿಂದ ಆ ಛಾಯಾಚಿತ್ರವನ್ನು ತೆಗೆದುಕೊಂಡಿದೆ. ನಾವು ದಸ್ತಾವೇಜುಗಳನ್ನು ಸಲ್ಲಿಸಿದ್ದ ಪೋರ್ಟಲ್‌ಗೆ ಕೇವಲ ಜಿಲ್ಲಾಧಿಕಾರಿಗೆ ಮಾತ್ರ ಪ್ರವೇಶವಿದ್ದು, ಸಾರ್ವಜನಿಕರಿಗೆ ಅದು ಲಭ್ಯವಿಲ್ಲ. ಪ್ರಾತಿನಿಧಿಕ ಉದ್ದೇಶಕ್ಕಾಗಿ ‘ಕ್ಯಾಚ್ ದಿ ರೈನ್’ ಪೋರ್ಟಲ್ ಹಲವು ಚಿತ್ರಗಳನ್ನು ಬಳಸಿಕೊಳ್ಳುತ್ತದೆ. ಆ ಚಿತ್ರಗಳನ್ನು ತೆಗೆದುಕೊಂಡು ಈ ಆರೋಪಗಳನ್ನು ಮಾಡಲಾಗಿದೆ” ಎಂದು ಖಾಂಡ್ವಾ ಜಿಲ್ಲಾ ಪಂಚಾಯತಿ ಸಿಇಒ ಡಾ. ನಾಗಾರ್ಜುನ್ ಬಿ.ಗೌಡ ಸ್ಪಷ್ಟಪಡಿಸಿದ್ದಾರೆ.