×
Ad

2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ

NDA ಬಲ 145ಕ್ಕೆ ಏರುವ ಸಾಧ್ಯತೆ

Update: 2025-12-31 22:30 IST

Photo Credit: PTI 

ಹೊಸದಿಲ್ಲಿ, ಡಿ.31: 245 ಸದಸ್ಯ ಬಲದ ರಾಜ್ಯಸಭೆಯ 72 ಸ್ಥಾನಗಳಿಗೆ 2026ರಲ್ಲಿ ಚುನಾವಣೆಗಳು ನಡೆಯಲಿದ್ದು, ಆಡಳಿತಾರೂಢ ಎನ್‌ಡಿಎ ಸುಮಾರು 50 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಪ್ರಸ್ತುತ ಈ 72 ಸ್ಥಾನಗಳ ಪೈಕಿ 40 ಸ್ಥಾನಗಳನ್ನು ಎನ್‌ಡಿಎ ಹೊಂದಿದ್ದು, 25 ಸದಸ್ಯರನ್ನು ಹೊಂದಿರುವ ಇಂಡಿಯಾ ಮೈತ್ರಿಕೂಟವು ಐದು ಸ್ಥಾನಗಳ ಕುಸಿತವನ್ನು ಕಾಣುವ ಸಾಧ್ಯತೆ ಇದೆ.

ವಿಧಾನಸಭೆಗಳಲ್ಲಿನ ಶಾಸಕ ಬಲವನ್ನು ಪರಿಗಣಿಸಿದರೆ, ಬಿಜೆಪಿ ಮಿತ್ರಪಕ್ಷಗಳಿಗೆ ಎಷ್ಟು ಸ್ಥಾನಗಳನ್ನು ಬಿಟ್ಟುಕೊಡುತ್ತದೆ ಎಂಬುದರ ಮೇಲೆ ಅವಲಂಬಿಸಿ 37ರಿಂದ 38 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ತನ್ನ ಸ್ಥಾನಗಳನ್ನು 8ರಿಂದ 9ರಷ್ಟು ಹೆಚ್ಚಿಸಿಕೊಳ್ಳಬಹುದು. ಎಪ್ರಿಲ್, ಜೂನ್, ಜುಲೈ ಮತ್ತು ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ 30 ಸ್ಥಾನಗಳನ್ನು ಪ್ರಸ್ತುತ ಬಿಜೆಪಿ ಹೊಂದಿದೆ.

2026ರ ಜೂನ್‌ನಲ್ಲಿ ಶಕ್ತಿಸಿನ್ಹ ಗೋಹಿಲ್ ನಿವೃತ್ತಿಯಾಗುವುದರಿಂದ ಗುಜರಾತಿನಿಂದ ಕಾಂಗ್ರೆಸ್‌ಗೆ ಯಾವುದೇ ರಾಜ್ಯಸಭಾ ಸದಸ್ಯರು ಉಳಿಯಲಾರರು. ಪಶ್ಚಿಮ ಬಂಗಾಳದ ಏಕೈಕ ಸಿಪಿಎಂ ಸದಸ್ಯ ಬಿಕಾಶ ರಂಜನ ಭಟ್ಟಾಚಾರ್ಯ ಅವರು ಎಪ್ರಿಲ್‌ನಲ್ಲಿ ನಿವೃತ್ತರಾಗುವುದರಿಂದ, ಪಕ್ಷದ ರಾಜ್ಯಸಭಾ ಪ್ರತಿನಿಧಿತ್ವ ಕೇವಲ ಕೇರಳಕ್ಕೆ ಸೀಮಿತವಾಗಲಿದೆ. 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ರಾಜ್ಯಸಭಾ ಸದಸ್ಯರಿಲ್ಲದ ಸ್ಥಿತಿ ಉಂಟಾಗಲಿದೆ.

ಮಹಾ ವಿಕಾಸ ಅಘಾಡಿಯಲ್ಲಿನ ಅನಿಶ್ಚಿತತೆ ಹಾಗೂ ಮೈತ್ರಿಕೂಟದ ಒಳಾಂಗಣ ಗೊಂದಲಗಳಿಂದಾಗಿ ಮಹಾರಾಷ್ಟ್ರದಲ್ಲಿ ಎನ್‌ಸಿಪಿ (ಶರದ್ ಪವಾರ್)ಗೆ ಭವಿಷ್ಯ ಮಸುಕಾಗುವ ಸಾಧ್ಯತೆ ಇದೆ. ಪಕ್ಷದ ಇಬ್ಬರು ಸದಸ್ಯರು ನಿವೃತ್ತರಾಗುತ್ತಿರುವುದರಿಂದ ರಾಜ್ಯಸಭೆಯಲ್ಲಿ ಪ್ರತಿನಿಧಿತ್ವ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

ಪ್ರಸ್ತುತ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯಲ್ಲಿ ಏಳು ನಾಮನಿರ್ದೇಶಿತ ಸದಸ್ಯರು ಸೇರಿ 135 ಸಂಸದರ ಬೆಂಬಲ ಹೊಂದಿದ್ದು, ಇಂಡಿಯಾ ಮೈತ್ರಿಕೂಟಕ್ಕೆ 80 ಸದಸ್ಯರ ಬೆಂಬಲವಿದೆ. 29 ಸಂಸದರು ಪಕ್ಷೇತರರಾಗಿದ್ದಾರೆ. ನವೆಂಬರ್ ಚುನಾವಣೆಗಳ ಬಳಿಕ ಎನ್‌ಡಿಎ ಬಲ ಸುಮಾರು 145ಕ್ಕೆ ಏರಲಿದೆ ಹಾಗೂ ಇಂಡಿಯಾ ಮೈತ್ರಿಕೂಟದ ಬಲ 75ಕ್ಕೆ ಇಳಿಯುವ ಸಾಧ್ಯತೆ ಇದೆ.

ಈ 72 ಸ್ಥಾನಗಳು ತೆರವಾಗುವುದರ ಜೊತೆಗೆ ನಾಮನಿರ್ದೇಶಿತ ಸಂಸದ ಹಾಗೂ ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರು ಮಾರ್ಚ್‌ನಲ್ಲಿ ನಿವೃತ್ತರಾಗಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಹೊಂದಿರುವ ಒಂದು ಸ್ಥಾನವನ್ನು ಬಿಜೆಪಿ ಕಿತ್ತುಕೊಳ್ಳುವ ಸಾಧ್ಯತೆ ಇದೆ. ಟಿಎಂಸಿ ತನ್ನ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳಲಿದೆ.

ಬಿಹಾರದಲ್ಲಿ ಐದು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಪ್ರಸ್ತುತ ಆರ್‌ಜೆಡಿ ಮತ್ತು ಜೆಡಿಯು ತಲಾ ಎರಡು ಹಾಗೂ ಆರ್‌ಎಲ್‌ಎಂ ಒಂದು ಸ್ಥಾನ ಹೊಂದಿವೆ. ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ಅಗತ್ಯವಿರುವ ಮತಗಳ ಕೊರತೆಯಿಂದ ಐದನೇ ಸ್ಥಾನ ಗೆಲ್ಲುವುದು ಕಷ್ಟವಾಗಲಿದೆ. ಹರಿವಂಶ ಅವರು ಮೂರನೇ ಅವಧಿಗೂ ಉಪಸಭಾಪತಿಯಾಗಿ ಮರಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಆಂಧ್ರಪ್ರದೇಶದಲ್ಲಿ ಟಿಡಿಪಿ ನೇತೃತ್ವದ ಎನ್‌ಡಿಎ ನಾಲ್ಕೂ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ವೈಎಸ್‌ಆರ್ ಕಾಂಗ್ರೆಸ್ ತನ್ನ ಮೂರು ಸ್ಥಾನಗಳನ್ನು ಕಳೆದುಕೊಳ್ಳಬಹುದು. ಬಿಜೆಪಿ ಒಂದು ಹೆಚ್ಚುವರಿ ಸ್ಥಾನವನ್ನು ಗೆಲ್ಲುವ ಸಾಧ್ಯತೆಯೂ ಇದೆ. ಒಡಿಶಾದಲ್ಲಿ ಬಿಜೆಡಿಯನ್ನು ಹೊರದಬ್ಬಿ ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿಕೊಳ್ಳಬಹುದು. ಆದರೆ ಜಾರ್ಖಂಡ್‌ನಲ್ಲಿ ಜೆಎಂಎಂಗೆ ಒಂದು ಸ್ಥಾನವನ್ನು ಕಳೆದುಕೊಳ್ಳಲಿದೆ.

ಕಾಂಗ್ರೆಸ್ ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಗುಜರಾತ್‌ನಲ್ಲಿ ತಲಾ ಒಂದು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಹರ್ಯಾಣ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶಗಳಲ್ಲಿ ತಲಾ ಒಂದು ಹೆಚ್ಚುವರಿ ಸ್ಥಾನ ಗೆಲ್ಲಬಹುದು.

ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ, ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಹರ್ಯಾಣ, ಮೇಘಾಲಯ, ಮಣಿಪುರ, ಮಧ್ಯಪ್ರದೇಶ, ಜಾರ್ಖಂಡ್, ಅರುಣಾಚಲ ಪ್ರದೇಶ, ಮಿಜೋರಂ ಮತ್ತು ಉತ್ತರಾಖಂಡ ಸೇರಿ 22 ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ.

2026ರಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್, ಎಸ್‌ಪಿ ನಾಯಕ ರಾಮಗೋಪಾಲ ಯಾದವ, ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ರಾಮದಾಸ್ ಆಠವಳೆ ಸೇರಿದಂತೆ ಹಲವು ಹಿರಿಯ ನಾಯಕರು ನಿವೃತ್ತರಾಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News