ಜನವರಿಯಿಂದ ಹಣಕಾಸು ಕ್ಷೇತ್ರದಲ್ಲಿ ಜಾರಿಯಾಗುವ ಹೊಸ ನಿಯಮಗಳು ಯಾವುವು?; ಇಲ್ಲಿದೆ ಮಾಹಿತಿ...
ಸಾಂದರ್ಭಿಕ ಚಿತ್ರ | Photo Credit : freepik.com
ಹೊಸ ನೀತಿಯಲ್ಲಿ ಸ್ಥಿರ ಠೇವಣಿ ದರಗಳಲ್ಲಿ ಬದಲಾವಣೆ, ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕಿಂಗ್ ಕಡ್ಡಾಯ, 8ನೇ ವೇತನ ಆಯೋಗದ ಜಾರಿ ಮೊದಲಾದವು ಸೇರಿವೆ.
ಮುಂದಿನ ವರ್ಷ ಜನವರಿ 1ರಿಂದ ಹಣಕಾಸು ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ಬರುವಂತೆ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಬ್ಯಾಂಕಿಂಗ್, ಸರ್ಕಾರಿ ಉದ್ಯೋಗಿಗಳು ಮತ್ತು ರೈತರಿಗೆ ಸಂಬಂಧಿಸಿದ ನಿಯಮಗಳು ಸೇರಿವೆ. ಹೊಸ ನೀತಿಯಲ್ಲಿ ಸ್ಥಿರ ಠೇವಣಿ ದರಗಳಲ್ಲಿ ಬದಲಾವಣೆ, ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕಿಂಗ್ ಕಡ್ಡಾಯ, 8ನೇ ವೇತನ ಆಯೋಗದ ಜಾರಿ ಮತ್ತು ಪ್ರಧಾನ ಮಂತ್ರಿ ಕಿಸಾನ್ ಐಡಿಗಳಲ್ಲಿನ ಬದಲಾವಣೆ ಸೇರಿದೆ.
►ವಾರಕ್ಕೊಮ್ಮೆ ಸಿಬಿಲ್ ಅಪ್ಡೇಟ್
ಕ್ರೆಡಿಟ್ ಸ್ಕೋರ್ ಏಜೆನ್ಸಿಗಳು (CIBIL) ಇಷ್ಟು ದಿನ ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ಡೇಟಾವನ್ನು ನವೀಕರಿಸುತ್ತಿದ್ದವು. ಆದರೆ ಇನ್ನು ಹೊಸ ವರ್ಷದಿಂದ ಡೇಟಾಗಳು ಪ್ರತಿ ವಾರ ನವೀಕರಣಗೊಳ್ಳುತ್ತವೆ. ಇದು ಸಾಲ ಪಡೆದವರ ಹಣಕಾಸಿನ ವ್ಯವಹಾರದ ಬಗ್ಗೆ ತಿಳಿಯಲು ನೆರವಾಗುತ್ತದೆ.
ಎಸ್ಬಿಐ, ಪಿಎನ್ಬಿ ಮತ್ತು ಎಚ್ಡಿಎಫ್ಸಿ ಸೇರಿ ಹಲವು ಬ್ಯಾಂಕ್ಗಳು ಸಾಲದ ಬಡ್ಡಿದರವನ್ನು ಕಡಿಮೆ ಮಾಡುತ್ತಿದ್ದು, 2026ರಲ್ಲಿ ಬದಲಾವಣೆಯನ್ನು ಕಾಣಬಹುದು. ಇದರ ಜೊತೆಗೆ ಸ್ಥಿರ ಠೇವಣಿ ಬಡ್ಡಿದರವೂ ಪರಿಷ್ಕರಣೆಗೊಳ್ಳುತ್ತಿದೆ.
ಯುಪಿಐ ಮತ್ತು ಡಿಜಿಟಲ್ ಪಾವತಿಗೆ ಸಂಬಂಧಿಸಿ ಪ್ಯಾನ್, ಆಧಾರ್ ಲಿಂಕ್ ಇಲ್ಲದೆ ಬ್ಯಾಂಕ್ ಮತ್ತು ಸರ್ಕಾರಿ ಸೌಲಭ್ಯ ಪಡೆಯುವುದು ಕಷ್ಟವಾಗಲಿದೆ. ವಂಚನೆ ಮತ್ತು ದುರುಪಯೋಗ ತಡೆಯಲು ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಂನಂತಹ ವೇದಿಕೆಯಲ್ಲಿ ಬಳಸಲು ಸಿಮ್ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ.
► ಸಾಮಾಜಿಕ ಮಾಧ್ಯಮ ಮತ್ತು ಟ್ರಾಫಿಕ್
ಸರ್ಕಾರವು ಆಸ್ಟ್ರೇಲಿಯ ಮತ್ತು ಮಲೇಷ್ಯಾದಲ್ಲಿರುವಂತೆ 16ನೇ ವಯಸ್ಸಿಗಿಂತ ಕೆಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಸದಂತೆ ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ. ಸಾಮಾಜಿಕ ಮಾಧ್ಯಮಗಳಿಗೆ ವಯಸ್ಸು ಆಧರಿತ ಮಿತಿ ಮತ್ತು ಪೋಷಕರ ನಿಯಂತ್ರಣಗಳನ್ನು ಹೇರಲು ಚರ್ಚೆಗಳು ನಡೆಯುತ್ತಿವೆ.
ಬಹಳಷ್ಟು ನಗರಗಳು ಡೀಸೆಲ್ ಮತ್ತು ಪೆಟ್ರೋಲ್ನ ವಾಣಿಜ್ಯ ವಾಹನಗಳ ಆಗಮನವನ್ನು ತಡೆಯಲು ಕ್ರಮ ಕೈಗೊಳ್ಳುತ್ತಿದೆ. ದೆಹಲಿ ಮತ್ತು ನೋಯ್ಡಾದಲ್ಲಿ ಮಾಲಿನ್ಯವನ್ನು ತಡೆಯಲು ಪೆಟ್ರೋಲ್ ವಾಹನಗಳ ಡೆಲಿವರಿಗೆ ಮಿತಿ ಹೇರುವ ಸಾಧ್ಯತೆಯಿದೆ.
► 8ನೇ ವೇತನ ಆಯೋಗ ಜಾರಿ
7ನೇ ವೇತನ ಆಯೋಗವು ಡಿಸೆಂಬರ್ 31ಕ್ಕೆ ಅಂತ್ಯಗೊಳ್ಳುವ ಕಾರಣದಿಂದ ಜನವರಿ 1ರಿಂದ 8ನೇ ವೇತನ ಆಯೋಗದ ಜಾರಿಗೆ ಬರುವ ಸಾಧ್ಯತೆಯಿದೆ. ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ ಹೆಚ್ಚಾಗಲಿರುವುದರಿಂದ ಹಣದುಬ್ಬರದ ಸಂದರ್ಭದಲ್ಲಿ ವೇತನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳು ದಿನಗೂಲಿ ಮತ್ತು ಅರೆಕಾಲಿಕ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸುವ ಸಾಧ್ಯತೆಯಿದೆ.
► ರೈತರಿಗೆ ಬೆಳೆ ವಿಮೆ
ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಕಂತುಗಳನ್ನು ಪಡೆಯಲು ವಿಶೇಷ ಐಡಿಯನ್ನು ನೀಡುವ ಸಾಧ್ಯತೆಯಿದೆ. ಐಡಿಗಳು ಇಲ್ಲದವರಿಗೆ ಸಾಲದ ಮೊತ್ತ ಸಿಗದೆ ಇರಬಹುದು.
ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ವನ್ಯಜೀವಿಗಳಿಂದ ಹಾಳಾದ ಬೆಳೆಗೆ ಪರಿಹಾರ ನೀಡುವ ಸಾಧ್ಯತೆಯಿದೆ. ಆದರೆ ವನ್ಯಜೀವಿಗಳಿಂದ ಬೆಳೆ ಹಾಳಾದ 72 ಗಂಟೆಗಳಲ್ಲಿ ಅದನ್ನು ವರದಿ ಮಾಡುವ ಅಗತ್ಯವಿರುತ್ತದೆ.
► ಆದಾಯ ತೆರಿಗೆ ಫಾರ್ಮ್ ನಲ್ಲಿ ಖರ್ಚು ವೆಚ್ಚದ ವಿವರ
ಆದಾಯ ತೆರಿಗೆ ಇಲಾಖೆಯು ‘ಆದಾಯ ತೆರಿಗೆ ಕಾಯ್ದೆ-2025’ರ ಅಡಿಯಲ್ಲಿ ಸರಳೀಕೃತ ಐಟಿಆರ್ ಫಾರ್ಮ್ ಹಾಗೂ ನಿಯಮಗಳ ಜಾರಿ ಕುರಿತು ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಿದೆ. ಇದು ಮುಂದಿನ ಆರ್ಥಿಕ ವರ್ಷ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಹೊಸ ಕಾನೂನಿನ ಅಡಿಯಲ್ಲಿ ಬ್ಯಾಂಕಿಂಗ್ ಮತ್ತು ಖರ್ಚು ವೆಚ್ಚಗಳ ವಿವರ ಮೊದಲೇ ತುಂಬಿಸಿರುವ ಐಟಿಆರ್ ರಿಟರ್ನ್ ಫಾರ್ಮ್ ಗಳು ಸಲ್ಲಿಕೆಯನ್ನು ಮತ್ತಷ್ಟು ಸರಳಗೊಳಿಸಲಿದೆ. ಅಲ್ಲದೆ 1961ರಿಂದ ಜಾರಿಯಲ್ಲಿರುವ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಲಿದೆ. ಆದರೆ ಹಣಕಾಸು ವ್ಯವಹಾರಗಳ ಕುರಿತ ತನಿಖೆಯ ಸಾಧ್ಯತೆ ಹೆಚ್ಚಾಗಲಿದೆ.
ಎಲ್ಪಿಜಿ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಜನವರಿ 1ರಿಂದ ಪರಿಷ್ಕರಿಸಲಾಗುವುದು. ಅದೇ ದಿನವೇ ವಾಯುಯಾನ ಟರ್ಬೈನ್ ಫ್ಯೂಯೆಲ್ (ಎಟಿಎಫ್) ಬೆಲೆಗಳು ನವೀಕರಣಗೊಳ್ಳಲಿವೆ. ಹೀಗಾಗಿ ವಾಯುಯಾನ ದರಗಳ ಬೆಲೆಯ ಮೇಲೆ ಪರಿಣಾಮ ಬೀರಿ ಪರೋಕ್ಷವಾಗಿ ಗೃಹೋಪಯೋಗಿ ಬಜೆಟ್ಗಳು ಹೆಚ್ಚಾಗಲಿವೆ.