ಅಸ್ಸಾಂ ಸಿಎಂ ವಿರುದ್ಧ ಕೋಮು ರಾಜಕೀಯದ ಆರೋಪ: ಪತ್ರಕರ್ತ ಅಭಿಸಾರ್ ಶರ್ಮಾ ವಿರುದ್ಧ ಎಫ್‌ಐಆರ್
ಪತ್ರಕರ್ತ ಅಭಿಸಾರ್ ಶರ್ಮಾ |Photo credit : X/@abhisar_sharma
ಗುವಾಹಟಿ, ಆ. 21: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕೋಮು ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಪತ್ರಕರ್ತ ಮತ್ತು ಯೂಟ್ಯೂಬರ್ ಅಭಿಸಾರ್ ಶರ್ಮಾ ವಿರುದ್ಧ ಅಸ್ಸಾಂ ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಗುವಾಹಟಿಯ ಕ್ರೈಂ ಬ್ರಾಂಚ್ ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಿದ್ದು, ಇದರಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯ ಉಂಟುಮಾಡುವ ಕೃತ್ಯಗಳು, ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಹಾಗೂ ರಾಷ್ಟ್ರೀಯ ಏಕೀಕರಣಕ್ಕೆ ವಿರುದ್ಧವಾದ ಹೇಳಿಕೆಗಳ ನೀಡಿದ ಆರೋಪಗಳನ್ನು ಹೊರಿಸಲಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯ ಅಲೋಕ್ ಬರುವಾ ಅವರ ದೂರಿನ ಆಧಾರದ ಮೇಲೆ ಈ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ.
ದೂರುದಾರ ಬರುವಾ, ಅಭಿಸಾರ್ ಶರ್ಮಾ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಅಪಹಾಸ್ಯ ಮಾಡುವ ಮೂಲಕ ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಶರ್ಮಾ "ರಾಮ ರಾಜ್ಯ" ತತ್ವವನ್ನು ಅವಹೇಳನ ಮಾಡಿದ್ದಾರೆ ಮತ್ತು ಅಸ್ಸಾಂ ಮುಖ್ಯಮಂತ್ರಿ ಕೋಮು ರಾಜಕೀಯ ಮಾಡುತ್ತಿದ್ದಾರೆ ಎಂಬ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಭಿಸಾರ್ ಶರ್ಮಾ ಅವರ ಕಾಮೆಂಟ್ ಗಳು ಹಿಂದೂ-ಮುಸ್ಲಿಂ ಧ್ರುವೀಕರಣಕ್ಕೆ ಕಾರಣವಾಗಬಹುದು. ಅವರು ರಾಜ್ಯವನ್ನು ಭ್ರಷ್ಟ ಹಾಗೂ ಕೋಮುವಾದಿ ಎಂದು ತೋರಿಸುವ ಮೂಲಕ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ದೂರುದಾರರ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗುವಾಹಟಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅಭಿಸಾರ್ ಶರ್ಮಾ ದೇಶ ಹಾಗೂ ಅದರ ಸಾರ್ವಭೌಮತ್ವದ ವಿರುದ್ಧ ಮಾತನಾಡಿದ್ದಾರೆ ಎಂಬ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದರು.
ಆಗಸ್ಟ್ 12 ರಂದು The wire ನ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ವಿರುದ್ಧ "ಆಪರೇಷನ್ ಸಿಂಧೂರ್" ಕುರಿತ ಲೇಖನಕ್ಕೆ ಸಂಬಂಧಿಸಿದಂತೆ ಜಾರಿಗೊಂಡಿದ್ದ ಸಮನ್ಸ್ ಬಳಿಕ ಕೆಲವೇ ದಿನಗಳಲ್ಲಿ ಈ ಎಫ್‌ಐಆರ್ ದಾಖಲಾಗಿದೆ. ಸುಪ್ರೀಂ ಕೋರ್ಟ್ ಆ ಪ್ರಕರಣದಲ್ಲಿ ವರದರಾಜನ್ ರಿಗೆ ಬಂಧನದಿಂದ ರಕ್ಷಣೆ ನೀಡಿದ್ದರೂ ಅಸ್ಸಾಂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.