×
Ad

Goa ನೈಟ್‌ಕ್ಲಬ್ ಅಗ್ನಿ ದುರಂತ ಪ್ರಕರಣ| ಉಪ್ಪಿನ ಅಗರದಲ್ಲಿ ಅಕ್ರಮ ನಿರ್ಮಾಣ, ಪರವಾನಗಿ ಇಲ್ಲದೆ ಕಾರ್ಯಾಚರಣೆ: ತನಿಖಾ ವರದಿ

Update: 2026-01-01 14:51 IST

Photo Credit : PTI 

ಪಣಜಿ,ಜ.1: ಡಿಸೆಂಬರ್ ಆರಂಭದಲ್ಲಿ 25 ಜನರ ಪ್ರಾಣಹಾನಿಗೆ ಕಾರಣವಾದ ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿನ ನೈಟ್‌ಕ್ಲಬ್‌ ಅನ್ನು ಉಪ್ಪಿನ ಅಗರದ ಮಧ್ಯದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದು, ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿತ್ತು ಎಂದು ಮ್ಯಾಜಿಸ್ಟೀರಿಯಲ್ ತನಿಖಾ ವರದಿ ತಿಳಿಸಿದೆ.

ಈ ಪ್ರಕರಣದಲ್ಲಿ ಹಲವು ಹಂತಗಳಲ್ಲಿ ಗಂಭೀರ ಆಡಳಿತಾತ್ಮಕ ಲೋಪಗಳು ಮತ್ತು ಅಧಿಕಾರಿಗಳ ಸಹಭಾಗಿತ್ವ ಕಂಡುಬಂದಿದೆ ಎಂದು ವರದಿಯು ಹೇಳಿದೆ.

ಡಿಸೆಂಬರ್ 31ರಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ, ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್ ಉಪ್ಪಿನ ಅಗರ ಹಾಗೂ ಜಲಮೂಲದ ಮಧ್ಯದಲ್ಲಿ ನಿರ್ಮಾಣವಾಗಿದ್ದು, ಇಂತಹ ನಿರ್ಮಾಣಕ್ಕೆ ಯಾವುದೇ ಕಾನೂನಿನ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ. ಉಪ್ಪಿನ ಅಗರವನ್ನು ಪರಿವರ್ತಿಸಿರುವುದು ಭೂ ಕಂದಾಯ ಸಂಹಿತೆ ಹಾಗೂ ಕರಾವಳಿ ವಲಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಗ್ರಾಮ ಪಂಚಾಯತ್ ನೀಡಿದ್ದ ವ್ಯಾಪಾರ ಪರವಾನಗಿ ಮಾರ್ಚ್ 31, 2024ರವರೆಗೆ ಮಾತ್ರ ಮಾನ್ಯವಾಗಿದ್ದು, ಬಳಿಕ ಅದನ್ನು ನವೀಕರಿಸಲಾಗಿರಲಿಲ್ಲ. ಆದರೂ ನೈಟ್‌ಕ್ಲಬ್ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಲೇ ಇತ್ತು. ಈ ಅವಧಿಯಲ್ಲಿ ಆವರಣವನ್ನು ಸೀಲ್ ಮಾಡಲು ಪಂಚಾಯತ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತನಿಖೆಯು ತಿಳಿಸಿದೆ.

ತನಿಖೆಯ ವೇಳೆ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮದ ಅಧಿಕಾರಿಗಳು, ಪರವಾನಗಿ ನವೀಕರಿಸಿಲ್ಲ ಎಂಬುದು ತಿಳಿದಿದ್ದರೂ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿಲ್ಲ ಹಾಗೂ ನೈಟ್‌ಕ್ಲಬ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದ ಆಸ್ತಿಯ ಮಾಲೀಕರೊಂದಿಗೆ ಪಂಚಾಯತ್ ಅಧಿಕಾರಿಗಳು ಶಾಮೀಗಿದ್ದಾರೆ ಎಂದು ವರದಿಯು ತಿಳಿಸಿದೆ.  

2023ರಲ್ಲಿ ಸಲ್ಲಿಸಲಾದ ಪರವಾನಗಿ ಅರ್ಜಿಯಲ್ಲಿ ನಕಲಿ, ತಿದ್ದುಪಡಿ ಮಾಡಿದ ದಾಖಲೆಗಳು ಮತ್ತು ಅನುಮೋದಿತ ಯೋಜನೆ, ಭೂ ದಾಖಲೆಗಳಂತಹ ಕಡ್ಡಾಯ ದಾಖಲೆಗಳು ಇಲ್ಲದಿರುವುದು ಕಂಡುಬಂದಿದೆ. ಅರ್ಜಿ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಪರವಾನಗಿಯನ್ನು ತರಾತುರಿಯಲ್ಲಿ ಮಂಜೂರು ಮಾಡಲಾಗಿದೆ ಎಂದು ವರದಿಯು ತಿಳಿಸಿದೆ.

ಪೊಲೀಸ್ ವರದಿ ಆಧಾರದ ಮೇಲೆ, ಅಗ್ನಿ ದುರಂತದ ದಿನ ನೈಟ್‌ಕ್ಲಬ್‌ನಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಪಟಾಕಿ ಪ್ರದರ್ಶನ ಆಯೋಜಿಸಲಾಗಿದ್ದು, ಅಗತ್ಯ ಎಚ್ಚರಿಕೆ ವಹಿಸದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತನಿಖೆಯು ಹೇಳಿದೆ. ಕ್ಲಬ್‌ನಲ್ಲಿ ತುರ್ತು ನಿರ್ಗಮನ ದ್ವಾರಗಳಿಲ್ಲದೆ ಮತ್ತು ಮಾನ್ಯ ಅನುಮತಿಗಳಿಲ್ಲದೆ ಕಾರ್ಯಾಚರಣೆ ನಡೆಯುತ್ತಿತ್ತು ಎಂದು ವರದಿಯು ಉಲ್ಲೇಖಿಸಿದೆ.

ಶಬ್ದ ಮಾಲಿನ್ಯ ಹಾಗೂ ಪಾರ್ಕಿಂಗ್ ಸಮಸ್ಯೆಗಳ ಕುರಿತು ಹಲವು ದೂರುಗಳು ದಾಖಲಾಗಿದ್ದರೂ, ‘ಸ್ಥಳದಲ್ಲಿ ಏನೂ ಕಂಡುಬಂದಿಲ್ಲ’ ಎಂಬ ಕಾರಣ ನೀಡಿ ಆ ದೂರುಗಳನ್ನು ಮುಚ್ಚಲಾಗಿದೆ. ನ್ಯಾಯಾಲಯದ ನಿರ್ದೇಶನಗಳನ್ನೂ ಪಾಲಿಸಲಾಗಿಲ್ಲ ಎಂದು ವರದಿಯು ತಿಳಿಸಿದೆ.

ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ತನಿಖೆ ನಡೆಯುತ್ತಿದ್ದು, ಇದುವರೆಗೆ ನೈಟ್‌ಕ್ಲಬ್‌ನ ಮೂವರು ಮಾಲಕರು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ದುರಂತದ ಬಳಿಕ ವಿದೇಶಕ್ಕೆ ಪಲಾಯನ ಮಾಡಿದ ಮಾಲಕರನ್ನು ನಂತರ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಐವರು ಗೋವಾ ಸರಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News