×
Ad

ಸಮವಸ್ತ್ರದಲ್ಲಿಲ್ಲದ ಪೊಲೀಸ್ ಸಿಬ್ಬಂದಿ ಫೈರಿಂಗ್ ಮಾಡುವುದನ್ನು ಕರ್ತವ್ಯವೆಂದು ಪರಿಗಣಿಸಲಾಗದು: ಸುಪ್ರೀಂ ಕೋರ್ಟ್

Update: 2025-06-15 23:15 IST

ಹೊಸದಿಲ್ಲಿ: ಸಮವಸ್ತ್ರದಲ್ಲಿಲ್ಲದ ಪೊಲೀಸ್ ಸಿಬ್ಬಂದಿ ಫೈರಿಂಗ್ ಮಾಡುವುದನ್ನು ಅಧಿಕೃತ ಕರ್ತವ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಿವಿಲ್ ಬಟ್ಟೆ ಧರಿಸಿದ ಪೊಲೀಸ್ ಸಿಬ್ಬಂದಿ ಕಾರನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿರುವುದನ್ನು ಸಾರ್ವಜನಿಕ ಸುವ್ಯವಸ್ಥೆಯ ಕರ್ತವ್ಯ ಅಥವಾ ಕಾನೂನುಬದ್ಧ ಬಂಧನ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ತಮ್ಮ ವಿರುದ್ಧದ ಕೊಲೆ ಆರೋಪಗಳನ್ನು ರದ್ದುಗೊಳಿಸುವಂತೆ ಪಂಜಾಬ್‌ ನ 9 ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಈ ಹೇಳಿಕೆ ನೀಡಿ ಅರ್ಜಿಯನ್ನು ವಜಾಗೊಳಿಸಿದೆ.

2015 ರಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಚಾಲಕ ಸಾವನ್ನಪ್ಪಿದ ನಂತರ ಕಾರಿನ ನಂಬರ್ ಪ್ಲೇಟ್ ತೆಗೆಯಲು ನಿರ್ದೇಶಿಸಿದ್ದಕ್ಕಾಗಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪರಂಪಾಲ್ ಸಿಂಗ್ ಅವರ ಮೇಲೆ ಹೊರಿಸಲಾದ ಸಾಕ್ಷ್ಯ ನಾಶ ಆರೋಪವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ವಿಚಾರಣೆ ವೇಳೆ ನ್ಯಾಯಾಲಯವು ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಅಧಿಕೃತ ಕರ್ತವ್ಯದ ಹೊದಿಕೆ ಹೋಲಿಸಲು ಸಾಧ್ಯವಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಡಿಸಿಪಿ ಮತ್ತು ಇತರ ಪೊಲೀಸ್ ಸಿಬ್ಬಂದಿಯನ್ನು ಅವರ ಆಪಾದಿತ ಕ್ರಮಗಳಿಗಾಗಿ ವಿಚಾರಣೆಗೆ ಒಳಪಡಿಸಲು ಪೂರ್ವಾನುಮತಿ ಅಗತ್ಯವಿಲ್ಲ ಎಂದೂ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮೇ 20, 2019 ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ 9 ಪೊಲೀಸ್ ಸಿಬ್ಬಂದಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಪೀಠ ವಜಾಗೊಳಿಸಿತು. ಹೈಕೋರ್ಟ್ ನಲ್ಲಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತು.

ಪೊಲೀಸ್ ಸಿಬ್ಬಂದಿಗ ಸಾಮಾನ್ಯ ಉಡುಪಿನಲ್ಲಿ ನಾಗರಿಕ ವಾಹನವನ್ನು ಸುತ್ತುವರೆದು ಅದರಲ್ಲಿದ್ದವರ ಮೇಲೆ ಗುಂಡು ಹಾರಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.

ಪೊಲೀಸರು ಹುಂಡೈ i-20 ಕಾರನ್ನು ಸುತ್ತುವರೆದು, ಗುಂಡು ಹಾರಿಸಿ, ಚಾಲಕನನ್ನು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಬಗ್ಗೆ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡವು, ಎಫ್‌ಐಆರ್‌ನಲ್ಲಿ ಹೇಳಿರುವಂತೆ ಪೊಲೀಸರು ಆತ್ಮ ರಕ್ಷಣೆಗಾಗಿ ಗುಂಡಿನ ದಾಳಿ ಮಾಡಿದ್ದಾರೆ ಎಂಬ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಎಂಟು ಮಂದಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಸೂಚನೆ ನೀಡಿದೆ.

ಪ್ರಕರಣವೇನು?

ದೂರಿನಲ್ಲಿ ಹೇಳಿರುವಂತೆ ಜೂನ್ 16, 2015 ರಂದು ಸಂಜೆ 6.30 ಕ್ಕೆ, ಬೊಲೆರೊ ಜೀಪ್, ಇನ್ನೋವಾ ಮತ್ತು ವೆರ್ನಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸ್ ತಂಡ, ಪಂಜಾಬ್‌ನ ಅಮೃತಸರದ ವರ್ಕಾ-ಬಟಾಲಾ ರಸ್ತೆಯಲ್ಲಿ ಬಿಳಿ ಹುಂಡೈ ಐ-20 ಕಾರನ್ನು ಅಡ್ಡಗಟ್ಟಿತ್ತು.

9 ಪೊಲೀಸರು ಸಾಮಾನ್ಯ ಉಡುಪಿನಲ್ಲಿ ಇಳಿದು ಕಾರನ್ನು ಸುತ್ತುವರಿದಿದ್ದರು. ಬಳಿಕ ಪಿಸ್ತೂಲ್ ಮತ್ತು ರೈಫಲ್‌ಗಳಿಂದ ಹತ್ತಿರದಿಂದ ಗುಂಡು ಹಾರಿಸಿದರು ಎಂದು ಆರೋಪಿಸಲಾಗಿದೆ.

ಈ ಘಟನೆಯನ್ನು, ಆಗ ಹತ್ತಿರದಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ದೂರುದಾರರು ಮತ್ತು ಇನ್ನೊಬ್ಬ ಸಾಕ್ಷಿಯು ಗುಂಡಿನ ದಾಳಿಯನ್ನು ನೋಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಗುಂಡಿನ ದಾಳಿ ಘಟನೆಯ ಸ್ವಲ್ಪ ಸಮಯದ ನಂತರ, ಡಿಸಿಪಿ ಪರಂಪಾಲ್ ಸಿಂಗ್ ಹೆಚ್ಚುವರಿ ಪಡೆಯೊಂದಿಗೆ ಸ್ಥಳಕ್ಕೆ ಆಗಮಿಸಿ, ಕಾರಿನ ನೋಂದಣಿ ಫಲಕಗಳನ್ನು ತೆಗೆದುಹಾಕಲು ನಿರ್ದೇಶಿಸಿದರು ಎಂದು ದೂರುದಾರ ಮತ್ತು ಸಾಕ್ಷಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News